ADVERTISEMENT

ಸಂಪರ್ಕ ರಸ್ತೆ ಇಲ್ಲದ ಬಡಾವಣೆ!

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 7:50 IST
Last Updated 6 ಫೆಬ್ರುವರಿ 2012, 7:50 IST

ಮಂಡ್ಯ: ಇದು, ನಗರದ ಹೊರವಲಯಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ಬಡಾವಣೆ. ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಹೆಸರಿನ ಇದು, 1986-87ರಲ್ಲಿ ಅಸ್ತಿತ್ವಕ್ಕೆ ಬಂದಿದೆ. 14 ವರ್ಷ ಕಳೆದರೂ ಇಂದಿಗೂ ಈ ಬಡಾವಣೆಗೆ ಸಮರ್ಪಕ ಸಂಪರ್ಕ ರಸ್ತೆಯೇ ಇಲ್ಲ ಎಂಬುದು ವಿಪರ್ಯಾಸವಷ್ಟೇ ಅಲ್ಲ, ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯೂ ಹೌದು.

ಇವು ಮಣ್ಣು ರಸ್ತೆಯ ಬದಿಯಲ್ಲಿ ದೀಪದ ವ್ಯವಸ್ಥೆಯೂ ಇಲ್ಲ. ಬಡಾವಣೆ ನಗರದ ಕೇಂದ್ರ ದಿಂದ ದೂರ ಇದೆ ಎಂದೋ ಏನೋ ಅಭಿವೃದ್ಧಿ ಯಿಂದಲೂ ದೂರವೇ ಉಳಿದಿದೆ. ಹೆಚ್ಚಿನವರು ಹೆದ್ದಾರಿ ಪಕ್ಕ ಇರುವ `ಬಿ.ಟಿ. ಲಲಿತಾ ನಾಯಕ್ ಬಡಾವಣೆ~ ಎಂಬ ಫಲಕ ನೋಡಿರ ಬಹುದು; ಬಡಾವಣೆಯನ್ನಲ್ಲ ಎಂದು ಅನಿಸಬಹುದು.

ಕುಡಿಯುವ ನೀರಿಗಾಗಿ ಬೋರ್‌ವೆಲ್ ಜೊತೆಗೆ, ಕಾವೇರಿ ನೀರಿನ ಪೂರೈಕೆಯೂ ಇದೆ. ರಸ್ತೆ, ಒಳಚರಂಡಿ ಸಮಸ್ಯೆ ಇದೆ. ಬಡಾವಣೆ ಎಂಬ ಹೆಸರಿದ್ದರೂ ತಾಂಡಾದ ವಾತಾವರಣ ದಿಂದ ಇನ್ನು ಹೊರಬಂದಿಲ್ಲ. ಚುನಾವಣೆ ಹೊರತುಪಡಿಸಿ ಜನಪ್ರತಿನಿಧಿಗಳು ಇತ್ತ ಬರುವುದೇ ಕಡಿಮೆ ಎಂಬುದು ಮುಖಂಡ ಕೃಷ್ಣನಾಯಕ್ ಅಭಿಮತ.

ನಗರಸಭೆ ವ್ಯಾಪ್ತಿಯಲ್ಲಿ ವಾರ್ಡ್ 34ಕ್ಕೆ ಸೇರುವ ಈ ಬಡಾವಣೆಯಲ್ಲಿ ಸುಮಾರು 54 ನಿವೇಶನ ಇದ್ದರೂ ಎಲ್ಲ ಫಲಾನುಭವಿಗಳು ನೆಲೆ ಊರಿಲ್ಲ. ಮುಖಂಡರ ಪ್ರಕಾರ 28 ಮನೆಗಳಿದ್ದು, 100-125 ಮತದಾರರು ಇರಬಹುದು.

ನಗರಸಭೆಯಿಂದ  ವಾರ್ಡ್‌ಗಳಿಗೆ ಅಭಿವೃದ್ಧಿ ಗಾಗಿ ನಗರಸಭೆಯಿಂದ ಲಕ್ಷಾಂತರ ರೂಪಾಯಿ ಬಿಡುಗಡೆ ಆಗಿದ್ದರೂ ಅಭಿವೃದ್ಧಿಯ ಗಾಳಿ ಇಲ್ಲಿ ಬೀಸಿಲ್ಲ. ಈಗ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಚಾಲ್ತಿಯಲ್ಲಿದ್ದು, ಅದಕ್ಕೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಣ ಬಿಡುಗಡೆ ಮಾಡಿದೆ ಎಂಬುದು ಗಮನಾರ್ಹ.

ನಿರ್ಮಿತಿ ಕೇಂದ್ರದ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅರೆ ಬರೆ ಕೆಲಸ ಆಗಿದೆ. `ಕಾಮಗಾರಿ ಗುಣಮಟ್ಟ ಚೆನ್ನಾಗಿಲ್ಲ. ಕಡಿಮೆ ಸಿಮೆಂಟ್ ಬಳಕೆಯಾಗಿದೆ. ಈ ಸಂಬಂಧ ನಿವಾಸಿಗಳು ಕಾಮಗಾರಿ ಸಂದರ್ಭದಲ್ಲಿ ಜಗಳ ವನ್ನು ಮಾಡಿದ್ದಾರೆ. ನಿರ್ಮಿತಿ ಕೇಂದ್ರವು ಉಪ ಗುತ್ತಿಗೆ ನೀಡಿದ್ದರಿಂದಾಗಿ, ಹೀಗೆ ಗುತ್ತಿಗೆ ಪಡೆದವರು ನಮ್ಮ ಮಾತಿಗೂ ಗೌರವ ನೀಡಲಿಲ್ಲ~ ಎಂಬುದು ಜಿಲ್ಲಾ ಲಂಬಾಣಿ ತಾಂಡಾ ಸಂಘಟನೆಯ ಕಾರ್ಯದರ್ಶಿಯೂ ಆದ ಕೃಷ್ಣನಾಯಕ್ ಅಸಮಾಧಾನ.

ಕಾಮಗಾರಿ ಕೈಗೊಂಡವರು ಕೆಲ ರಸ್ತೆಗಳನ್ನು ಹಾಗೇ ಬಿಟ್ಟಿದ್ದಾರೆ. ಅಂದಾಜಿನಂತೆ 358 ಮೀಟರ್ ರಸ್ತೆ ಅಭಿವೃದ್ಧಿ ಪಡಿಸಬೇಕಿತ್ತು. ಈಗ 70-80 ಮೀಟರ್ ಆಗಿರ ಬಹುದು. ಕೆಲ ರಸ್ತೆಗಳಿಗೆ ಜಲ್ಲಿ ಸುರಿದು ಹೋಗಿದ್ದು, ಇನ್ನು ಅಭಿವೃದ್ಧಿ ಪಡಿಸುವುದಿಲ್ಲ ಎಂದು ಹೇಳಿ ಹೋಗಿದ್ದಾರೆ ಎನ್ನುತ್ತಾರೆ.

ಈ ಲೋಪದ ಬಗೆಗೆ ನಿರ್ಮಿತಿ ಕೇಂದ್ರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಿಗೆ ನಮ್ಮ ಸಂಘದ ಅಧ್ಯಕ್ಷೆಯಾದ ಬಿ.ಟಿ.ಲಲಿತಾನಾಯಕ್ ಅವರು ಲಿಖಿತ ದೂರು ಸಲ್ಲಿಸಿದ್ದು, ಕ್ರಮ ಕೈಗೊಳ್ಳದೇ ಇದ್ದರೆ ಧರಣಿ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ. ಪತ್ರ ಬರೆದು ತಿಂಗಳಾದರೂ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ತೋಡಿಕೊಂಡರು.

ಈ ಕುರಿತು ಸಂಪರ್ಕಿಸಿದಾಗ ನಿರ್ಮಿತಿ ಕೇಂದ್ರದ ನರೇಶ್ ಅವರು, ನಿರ್ಮಿತಿ ಕೇಂದ್ರವೇ ಕಾಮಗಾರಿ ಕೈಗೊಂಡಿದೆ. ಉಪ ಗುತ್ತಿಗೆ ನೀಡುವ ಪ್ರಶ್ನೆಯೇ ಇಲ್ಲ. ಹಣ ಬಿಡುಗಡೆ ಆಗದ ಕಾರಣ ಕಾಮಗಾರಿ ನಿಲ್ಲಿಸಿದ್ದೂ, ಈಗ ಜಲ್ಲಿ ಇರುವ ರಸ್ತೆಯನ್ನೂ ಅಭಿವೃದ್ಧಿಪಡಿಸಲಾಗುವುದು ಎನ್ನುತ್ತಾರೆ.

ತಾಂಡಾ ಅಭಿವೃದ್ಧಿ ನಿಗಮವೇ ಹಣ ಬಿಡುಗಡೆಗೆ ಸಮ್ಮತಿಸಿದ್ದೂ, ನಗರಸಭೆಯಿಂದ ನೆರವು ಬಂದಿಲ್ಲ ಎಂಬುದು ನಿಜ. ಈಗ ಆಗಿರುವ ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಇತ್ತ ಕೃಷ್ಣನಾಯಕ್ ಅವರು, `ಗುಣಮಟ್ಟ ಕುರಿತು ಕೇಳಲೇ ಬೇಡಿ. ಈಗ ಆಗಿರುವ ಕಾಮ ಗಾರಿಯಲ್ಲಿಯೂ ಬಿರುಕು ಮೂಡಿದೆ. ತೆರೆದ ಬಾಕ್ಸ್ ಚರಂಡಿಯನ್ನು ಗಣನೆಗೆ ತೆಗೆದುಕೊಂಡು ರಸ್ತೆ ಮಾಡಬೇಕಿತ್ತು. ಎನೋ ಮಾಡಿದ್ದಾರೆ. ಈಗ ಮೊದಲೇ ಎಷ್ಟೋ ಚೆನ್ನಾಗಿತ್ತು ಎನ್ನಿಸುತ್ತದೆ~ ಎಂಬುದು ಕೃಷ್ಣನಾಯಕ್ ದೂರು.

ವಾರ್ಡ್ 34ರ ವ್ಯಾಪ್ತಿಗೆ ಬಂದರೂ, ಚುನಾವಣೆ ಸಂದರ್ಭ ಹೊರತುಪಡಿಸಿದರೆ ವಾರ್ಡ್‌ನಿಂದ ಗೆದ್ದವರು ಇನ್ನೂ ಇತ್ತ ತಲೆಹಾಕಿಲ್ಲ. ಇದು, ನಗರದ ಮಗ್ಗುಲಲ್ಲೇ ಇರುವ ಬಡಾವಣೆ ಸ್ಥಿತಿ. ಸಂಜೆ, ಹೊತ್ತು ಮುಳುಗಿದರೆ ಮಹಿಳೆಯರು ಬಡಾವಣೆ ತಲುಪುವವರೆಗೂ ಆತಂಕದಲ್ಲೇ ತೆರಳಬೇಕು ಎಂಬುದು ಈಗಿನ ಅಲ್ಲಿನ ವಾತಾವರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.