ADVERTISEMENT

ಸಂಭ್ರಮದ ಚೌಡೇಶ್ವರಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 5:39 IST
Last Updated 6 ಏಪ್ರಿಲ್ 2013, 5:39 IST

ಮದ್ದೂರು: ಸಮೀಪದ ಹೆಮ್ಮನಹಳ್ಳಿಯ ಶಕ್ತಿ ದೇವತೆ ಚೌಡೇಶ್ವರಿದೇವಿಯ ಬ್ರಹ್ಮರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಉದ್ಘೋಷಗಳ ನಡುವೆ ಸಂಭ್ರಮದಿಂದ ನಡೆಯಿತು.

ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ದೇಗುಲದ ಪ್ರಾಂಗಣದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಿರು ಬಿಸಲಿನ ಝಳದ ನಡುವೆಯೂ ಭಕ್ತರು ಸಡಗರ ಸಂಭ್ರಮದೊಂದಿಗೆ ರಥವನ್ನು ಎಳೆದು ಪುನೀತರಾದರು. ರಥವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಗ್ರಾಮದ ಜನರು ತಮ್ಮ ಮನೆಗಳ ಮುಂದೆ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ರಥಕ್ಕೆ ಹಣ್ಣು ದವನ ಎಸೆಯುವ ಮೂಲಕ ತಮ್ಮ ಹರಕೆ ಅಭಿಷ್ಟೆ ಸಲ್ಲಿಸಿದರು. ಹೊಸದಾಗಿ ಮದುವೆಯಾದ ನೂರಾರು ನವ ದಂಪತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ವಿಶೇಷ ಪೂಜೆ ಅರ್ಪಿಸಿದರು. ಮಧ್ಯಾಹ್ನ ದೇವಿಗೆ ವಿಶೇಷ ಅಭಿಷೇಕ, ಅಲಂಕಾರ ಪೂಜೆ ನಡೆಯಿತು. ಆಗಮಿಸಿದ್ದ ಸಾವಿರಾರು ಭಕ್ತರಿಗೆ ದೇಗುಲ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ನಡೆಯಿತು.

ರಾತ್ರಿ 12 ಗಂಟೆಗೆ ಸರಿಯಾಗಿ  ದೇಗುಲದ ಗರ್ಭಗುಡಿಯೊಳಗೆ ನಂದಾದೀಪವನ್ನು ಹಚ್ಚಿಟ್ಟು, ದ್ವಾರವನ್ನು ಎಳೆನೀರಿನಿಂದ ಕಲೆಸಲಾದ ಅಮೃತ ಮಣ್ಣಿನಿಂದ ಮುಚ್ಚುವ ಮೂಲಕ ವಾರ್ಷಿಕ ಜಾತ್ರಾಮಹೋತ್ಸವಕ್ಕೆ ತೆರೆ ಬಿದ್ದಿತು. ದೇಗುಲ ಟ್ರಸ್ಟ್‌ನ ಗೌರವಾಧ್ಯಕ್ಷ ಎಚ್.ಎಸ್.ಪುಟ್ಟಸ್ವಾಮಿ, ಅಧ್ಯಕ್ಷ ಎಚ್.ಕೆ.ಕೃಷ್ಣ, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ನಾಗೇಶ್ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.