ADVERTISEMENT

ಸದಾಶಿವ ವರದಿ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 4:43 IST
Last Updated 11 ಜನವರಿ 2014, 4:43 IST

ಮಂಡ್ಯ:  ಬಹುಸಂಖ್ಯಾತ ಮಾದಿಗ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು. ನ್ಯಾ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸದಿದ್ದರೆ, ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಮಾದಿಗರ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ ಎಚ್‌. ಹನುಮಂತಪ್ಪ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕರಾಗಿದ್ದಾಗ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗ ಅಧಿಕಾರದಲ್ಲಿದ್ದರೂ ವರದಿ ಜಾರಿಗೆ ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿದರು.

ಈಗಾಗಲೇ ಮುಂದುವರೆದಿರುವ ಕೆಲವು ಸಮಾಜಗಳನ್ನು ಸೇರ್ಪಡೆಗೊಳಿಸುವ ಮೂಲಕ ಅನ್ಯಾಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸದಾಗಿ ಯಾವುದೇ ಸಮಾಜವನ್ನೂ ಸೇರಿಸಬಾರದು ಎಂದು ಒತ್ತಾಯಿಸಿದರು.
ಎನ್.ಆರ್. ಚಂದ್ರಶೇಖರ್, ಸಿ.ಕೆ. ಪಾಪಯ್ಯ, ಪುಟ್ಟಸ್ವಾಮಿ ಉಪಸ್ಥಿತರಿದ್ದರು.

ನಂತರ ನಗರದ ಹರ್ಡಿಕರ್‌ ಭವನದಲ್ಲಿ ನಡೆದ  ‘ನ್ಯಾಯಮೂರ್ತಿ ಎ.ಜೆ.ಸದಾಶಿವ  ಆಯೋಗ ವರದಿ ಅನುಷ್ಠಾನ ಕುರಿತ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ– -ಮಾದಿಗರ ಹೋರಾಟದ ಮುಂದಿನ ಸವಾಲುಗಳು' ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ವಿಚಾರವಾದಿ ಪ್ರೊ.ಎಚ್‌್. ಗೋವಿಂದಯ್ಯ ಅವರು, ಮಂಡ್ಯ: ದಲಿತರಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಬರುತ್ತದೆ ಎಂದರು.

ಮಾದಿಗರ ಮೀಸಲಾತಿ ಹೋರಾಟ ತಾತ್ವಿಕ ನೆಲೆಯಿಂದ ನಡೆಯುತ್ತಿರುವ ಹೋರಾಟವಾಗಿದೆ. ಇದನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ಪರಿಶಿಷ್ಟರ ಮೀಸಲಾತಿಯನ್ನು ಕೆಲವು ಬಲಾಢ್ಯ ಪರಿಶಿಷ್ಟರು ಮಾತ್ರ ಪಡೆದುಕೊಳ್ಳುತ್ತಿದ್ದು, ಒಳ ಜಾತಿಗಳ ಕೆಲವು ಸಮುದಾಯಗಳಿಗೆ ಇಂದಿಗೂ ಮೀಸಲಾತಿ ದೊರೆತಿಲ್ಲ ಎಂದರು.

ಮೈಸೂರು ವಿವಿ ಡಾ.ಬಾಬು ಜಗಜೀವನರಾಮ್ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಮೈಲಾಳ್ಳಿ ರೇವಣ್ಣ ಎಂ.ಯು.ಮೂಗನೂರು, ಮುತ್ತಣ್ಣ ಬೆಣ್ಣೂರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.