ADVERTISEMENT

ಸಮರಸದಿಂದ ಬದುಕು ಹಸನು:ನ್ಯಾ.ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 5:41 IST
Last Updated 17 ಡಿಸೆಂಬರ್ 2012, 5:41 IST

ಮಂಡ್ಯ: ಕ್ಷುಲ್ಲಕ ಕಾರಣಗಳಿಗಾಗಿ ಕೌಟುಂಬಿಕ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ಸೆಷನ್ಸ್ ಕೋರ್ಟ್ ಪ್ರಧಾನ ನ್ಯಾಯಾಧೀಶರಾದ ಬಿ.ಶಿವಲಿಂಗೇಗೌಡ ಸಲಹೆ ನೀಡಿದರು.

ನಗರದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕೌಟುಂಬಿಕ ಸಮಸ್ಯೆಗಳ ಪಾರಿವಾರಿಕ್ ಮಹಿಳಾ ಜನತಾ ನ್ಯಾಯಾಲಯದ ಉದ್ಘಾಟನೆ ಹಾಗೂ ಮಹಿಳೆಯರಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಮದುವೆಯ ಹಿಂದೆ ಹಲವು ಸಂಬಂಧಗಳಿರುತ್ತವೆ. ಪತಿ-ಪತ್ನಿ ನಡುವಿನ ಕಲಹವು ಕುಟುಂಬದ ಎಲ್ಲಾ ಸದಸ್ಯರ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ, ಸಾಮರಸ್ಯದಿಂದ ಜೀವನ ನಡೆಸಬೇಕೆಂದು ಕಿವಿಮಾತು ಹೇಳಿದರು. ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನ ಪ್ರಥಮ ಬಾರಿಗೆ ಮಂಡ್ಯದಲ್ಲಿ ಪ್ರಾರಂಭಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.

ಜಿಲ್ಲಾ ಸೆಷನ್ಸ್ ಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾದ ಎ.ಎಸ್.ಬೆಳ್ಳುಂಕೆ ಮಾತನಾಡಿ, ವಿವಾಹ ಒಂದು ಅನನ್ಯ ಸಂಬಂಧ. ಇಂತಹ ಸಂಬಂಧ ಕಡಿದುಕೊಂಡು, ವ್ಯಾಜ್ಯದ ಹಂತಕ್ಕೆ ಹೋಗುವ ಮುನ್ನವೇ ಸರಿಪಡಿಸುವಂತಹ ಪ್ರಯತ್ನ ಮಾಡಲಾಗಿದೆ ಎಂದರು.

ಐಎಎಸ್ ಪ್ರೊಬೇಷನರಿ ಅಧಿಕಾರಿ ಹೆಪ್ಸಿಬಾರಾಣಿ ಕೊರ‌್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಶಾರದಾ, ಮಂಡ್ಯ ತಹಶೀಲ್ದಾರ್ ಡಾ. ಬಿ.ಕೆ.ಮಮತಾ, ನ್ಯಾಯಾಧೀಶರಾದ ಸುರೇಶ್ ಕೋಗಿಲಗೇರಿ, ತಿಮ್ಮೇಗೌಡ, ಮಂಜುನಾಥ್, ಮಂಡ್ಯ ವಕೀಲರ ಸಂಘದ ಉಪಾಧ್ಯಕ್ಷ ಮಹೇಶ್, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.