ADVERTISEMENT

ಸಮಸ್ಯೆಯ ಸುಳಿಯಲ್ಲಿ ಹಳೆಬೀಡು ಫಾರ್ಮ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 4:40 IST
Last Updated 16 ಅಕ್ಟೋಬರ್ 2012, 4:40 IST

ಪಾಂಡವಪುರ: ಸರ್ಕಾರದ ನಿರ್ಲಕ್ಷ್ಯ, ಅಧಿಕಾರಿಗಳ ಉದಾಸೀನತೆಯಿಂದ ತಾಲ್ಲೂಕಿನ ಹಳೆಬೀಡು ತೋಟಗಾರಿಕೆ ಕ್ಷೇತ್ರವು (ಹಳೆಬೀಡು ಫಾರ್ಮ್) ಸಮಸ್ಯೆಯ ಸುಳಿಯಲ್ಲಿ ತಲುಪಿದೆ.

ಕೃಷಿ ಇಲಾಖೆಗೆ ಒಳಪಟ್ಟಿದ್ದ 44.29 ಎಕರೆ ವಿಸ್ತೀರ್ಣ ಹೊಂದಿರುವ ಫಾರ್ಮ್ ಈಗ 1969ರಲ್ಲಿ ತೋಟಗಾರಿಕೆ ಇಲಾಖೆಗೆ ವರ್ಗಾವಣೆಗೊಂಡಿತು. ಸೀಬೆ, ಸಪೋಟಾ, ತೆಂಗು, ಮಾವುಗಳನ್ನು ಹೊಂದಿದ್ದ ಫಾರ್ಮ್‌ನಲ್ಲಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.

ಮಾವು, ತೆಂಗು, ಸಪೋಟಾಗಳ ನರ್ಸರಿ ಕೂಡ ಇದ್ದು, ತೋಟಗಾರಿಕೆ ನಡೆಸುವವರಿಗೆ ಇಲ್ಲಿಂದಲೇ ಸಸಿಗಳನ್ನು ಸರಬರಾಜು ಮಾಡಲಾಗುತ್ತದೆ. ಕಸಿ ಮಾಡಿದ ಸೀಬೆ ಹಾಗೂ ಮಾವಿನ ಸಸಿಗಳನ್ನು ರೈತರಿಗೆ ನೀಡಲಾಗುತ್ತಿದೆ.

ಇಲ್ಲಿ ಬೆಳೆಯುತ್ತಿರುವ ಸೀಬೆ, ಸಪೋಟಾ ಹಣ್ಣು, ತೆಂಗಿನ ಕಾಯಿ, ಮಾವಿನ ಹಣ್ಣುಗಳನ್ನು ಹರಾಜು ಮೂಲಕ ಪ್ರತಿ ವರ್ಷ ಮಾರಾಟ ಮಾಡಲಾಗುತ್ತಿತ್ತು. ಈಗ ಸೀಬೆ ಗಿಡಗಳು ನಶಿಸಿಹೋಗಿವೆ. ಅವುಗಳ ಆಯಸ್ಸು 25. ಪೂರ್ತಿಯಾಗಿರುವುದರಿಂದ ಗಿಡಗಳು ನಾಶವಾಗಿವೆ ಎನ್ನುವುದು ತಜ್ಞರ ಅಭಿಪ್ರಾಯ.

ತೋಟದ ಫಾರ್ಮ್ ಸುತ್ತ ವ್ಯವಸ್ಥಿತ ಬೇಲಿ ಇಲ್ಲದಿರುವುದರಿಂದ ಸಪೋಟಾ, ತೆಂಗು, ಮಾವಿನ ಹಣ್ಣುಗಳನ್ನು ಸಾರ್ವಜನಿಕರು ಕಿತ್ತಕೊಂಡು ಹೋಗುವುದು, ಜಾನುವಾರುಗಳು ತೋಟಕ್ಕೆ ನುಗ್ಗುವುದು ಸಾಮಾನ್ಯವಾಗಿದೆ.

ಮುಂದಿನ ದಿನಗಳಲ್ಲಿ ಫಾರ್ಮ್ ಒತ್ತುವರಿಯಾದರೂ ಅಚ್ಚರಿಯಿಲ್ಲ. ತೋಟದ ನಿರ್ವಹಣೆ ಮತ್ತು ರಕ್ಷಣೆಗಾಗಿ ಏಳು ಸಿಬ್ಬಂದಿಯ ಅವಶ್ಯ ಇದೆ. ಆದರೆ ಇಲ್ಲಿ ಕೆಲಸ ನಿರ್ವಹಿಸುತ್ತಿರುವುದು ಇಬ್ಬರು ಮಾತ್ರ.

ಫಾರ್ಮ್ ಪೂರ್ತಿಯಾಗಿ ಹಾಳಾಗುವ ಮುನ್ನವೇ ರಾಜ್ಯ ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಮಾದರಿ ಫಾರ್ಮ್ ನಿರ್ಮಾಣಕ್ಕೆ ಮುಂದಾಗಬೇಕು ಎನ್ನುವುದು ಜನರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.