ADVERTISEMENT

ಸಮಾಜದ ಅಭಿವೃದ್ಧಿ ಮುಖ್ಯ: ಶ್ರೀಹರಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 6:40 IST
Last Updated 4 ಜುಲೈ 2013, 6:40 IST

ನಾಗಮಂಗಲ:   ಮಹಿಳೆಯರು, ಕಾರ್ಮಿಕರು,ಬಡವರು, ರೈತರನ್ನು ಸಂಘಟಿಸಿ ಅವರ ಕುಟುಂಬದ ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡುವ ಮೂಲಕ ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಉದ್ದೇಶ ಎಂದು ಮೈಸೂರಿನ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ಕಚೇರಿಯ ಯೋಜನಾ ಧಿಕಾರಿ ಶ್ರಿಹರಿ ಹೇಳಿದರು.

ಪಟ್ಟಣದ ಕೆಎಸ್‌ಟಿ ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಒಡೆತನದ ಮಾದಪ್ಪಗೌಡ ಭವನದಲ್ಲಿ ಏರ್ಪಡಿಸಿದ್ದ ಯೋಜನೆಯ ತಾಲ್ಲೂಕು ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾದೇಶಿಕ  ಸಮಸ್ಯೆಗಳಿಗನುಗುಣವಾಗಿ ಅಧ್ಯಯನ ನಡೆಸಿ  ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಜನ ಸಂಘಟನೆ, ಸ್ವಸಹಾಯ ಸಂಘ ರಚನೆ, ಮಾನವ ಸಂಪನ್ಮೂಲ ಅಭಿವೃದ್ದಿ, ಕೃಷಿ ಚಟುವಟಿಕೆ, ಜ್ಞಾನವಿಕಾಸ, ಬ್ಯಾಂಕ್‌ಗಳಿಂದ ಸಾಲ ಕೊಡಿಸುವುದು, ಕಾರ್ಯಕರ್ತರಿಗೆ ವಿಮೆ, ಸಮಾಜಿಕವಾಗಿ ಇರುವ ಸಮಸ್ಯೆಗಳ ಬಗ್ಗೆ ಜನಜಾಗೃತಿ, ಪರ್ಯಾಯ ಇಂಧನ ಕಾರ್ಯಕ್ರಮ, ಗ್ರಾಮ ನೈರ್ಮಲ್ಯ, ಸ್ವಗೃಹ ಯೋಜನೆ, ಮಾಸಾಶನ, ಶುದ್ಧಗಂಗಾ ಯೋಜನೆ,  ಶಾಲಾ ಶಿಕ್ಷಣಕ್ಕೆ ಉತ್ತೇಜನ ಮತ್ತು ಶಾಲೆಗಳಿಗೆ  ಮೂಲ  ಸೌಕರ್ಯ, ಹಿಂದೂ ರುದ್ರಭೂಮಿ ಅಭಿವೃದ್ಧಿಗೆ 1ರಿಂದ 2ಲಕ್ಷ ಅನುದಾನ, ಹಾಲು ಸಂಗ್ರಹಣಾ ಕೇಂದ್ರಕ್ಕೆ ಸಹಾಯಧನ, ವಿದ್ಯುತ್ ಸಮಸ್ಯೆ, ಗೋಶಾಲೆ ಅಭಿವೃದ್ಧಿ ಸೇರಿದಂತೆ ಸಮಾಜ ಪರಿವರ್ತನೆಗೆ ಪೂರಕವಾದ ನೂರಾರು ಯೋಜನೆಗಳ ಮೂಲಕ ಸಮಾಜದ ಅಭಿವೃದ್ಧಿಗೆ  ನಾಗಮಂಗಲ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ನಮ್ಮ ಪ್ರತಿನಿಧಿಗಳು ಕೆಲಸ ನಿರ್ವಹಿಸಲಿದ್ದು, ನಮ್ಮ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ 40ಲಕ್ಷ ಸದಸ್ಯರು, 3 ಲಕ್ಷದಷ್ಟು ಸ್ವಸಹಾಯ ಸಂಘದವರು 1 ಸಾವಿರ ಕೋಟಿ ಉಳಿತಾಯ ಮಾಡಿದ್ದಾರೆ.  ಸಾಲ ಪಡೆದವರಿಂದ ಶೇ.100 ಸಾಲ ಮರುಪಾವತಿಯಾಗಿದೆ ಎಂದು ವಿವರಿಸಿದರು.

ಜಿಲ್ಲಾ ಯೋಜನಾಧಿಕಾರಿ ಯೋಗೀಶ್ ಪ್ರಾಸ್ತಾವಿಕ ನುಡಿ ನುಡಿದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ವಿವರವಾಗಿ ತಿಳಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷ ಬಸವಯ್ಯ ವಹಿಸಿದ್ದರು. ತಾ.ಪಂ. ಸದಸ್ಯ ಮೂಡ್ಲೀಗೌಡ, ನಿವೃತ್ತ ಶಿಕ್ಷಕ ಕಲೀಂ, ಎಸ್.ಬಿ. ರಮೇಶ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.