ADVERTISEMENT

ಸಮುದಾಯಗಳಿಲ್ಲದೆ ವಿವಿಗಳಿಲ್ಲ: ಮುರಿಗೆಪ್ಪ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 9:45 IST
Last Updated 23 ಸೆಪ್ಟೆಂಬರ್ 2011, 9:45 IST

ನಾಗಮಂಗಲ: ಸಮುದಾಯಗಳ ಚರಿತ್ರೆ, ಇತಿಹಾಸವನ್ನು ಶ್ರೀಸಾಮಾನ್ಯ ತಿಳಿಯಬೇಕು. ಅಂತಹ ಕೆಲಸಗಳನ್ನು ವಿಶ್ವವಿದ್ಯಾನಿಲಯಗಳು ಮಾಡಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎ. ಮುರಿಗೆಪ್ಪ ನುಡಿದರು.

ಗುರುವಾರ ಇಲ್ಲಿನ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಪರಂಪರೆ ಕೂಟ, ನಾಗಮಂಗಲ ಮತ್ತು ತಾಲ್ಲೂಕು ಪ್ರೌಢಶಾಲಾ ಸಮಾಜ ವಿಜ್ಞಾನ ಬೋಧಕರ ಸಂಘದ ಆಶ್ರಯದಲ್ಲಿ ನಡೆದ ಪ್ರೌಢಶಾಲಾ ಕಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಮತ್ತು ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ- ನಾಗಮಂಗಲ ಕೃತಿ ಬಿಡುಗಡೆ ಸಮಾರಂಭದದಲ್ಲಿ ಮಾತನಾಡಿದರು.

ವ್ಯಕ್ತಿ ತನ್ನನ್ನು ತಾನೇ ಜಿಜ್ಞಾಸೆಗೊಳಿಸಿಕೊಳ್ಳದೆ ಚರಿತ್ರೆ ಅರಿಯಲು ಸಾಧ್ಯವಿಲ್ಲ. ಪ್ರಾಚೀನ ಸಂಸ್ಕೃತಿ ಭವಿಷ್ಯದ ಪರಂಪರೆ ಉಜ್ವಲಗೊಳಿಸುವ ಅಂಶ ಗಳು. ದೇವಾಲಯಗಳು ಸಂಸ್ಕೃತಿ ಪ್ರತಿಬಿಂಬಿಸುವ ಸಾಧನಗಳು. ಒಂದು ಸಮುದಾಯದ ನಿರ್ಮಾಣ ಶಿಕ್ಷಕರಿಂದ ಮಾತ್ರ ಸಾಧ್ಯ. ಅಂತಹ ಶಿಕ್ಷಕರು ಸೃಜನ ಶೀಲರಾಗಿರಬೇಕು. ಶಿಕ್ಷಕ ಎಂದಿಗೂ ಮಾದರಿ ವ್ಯಕ್ತಿ ಎಂದರು.

ಯಾರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೋ ಆ ಕ್ಷೇತ್ರದ ಅಭಿವೃ ದ್ಧಿಗೆ ಶ್ರಮಿಸುವ ಭಾವ ಹೊಂದಬೇಕು. ಪ್ರಸ್ತುತ ಯುವ ಸಮೂಹವನ್ನು ಆ ದಿಕ್ಕಿನಲ್ಲಿ ಸಾಗಲು ಪ್ರೇರೇಪಿಸಬೇಕು. ವಿದ್ಯಾರ್ಥಿಗಳು ಝೆರಾಕ್ಸ್ ಸಂಸ್ಕೃತಿ ತೊರೆದು, ಪಠ್ಯ ವಿಷಯಗಳಲ್ಲಿ ಚಿಕಿತ್ಸಕ ಮನೋಭಾವ ರೂಢಿಸಿಕೊಳ್ಳಬೇಕು. ಆಗ ಶಿಕ್ಷಣದ ನಿಜವಾದ ಸಾರ ಅರಿವಾಗುತ್ತದೆ ಎಂದರು.

ತೈಲೂರು ವೆಂಕಟಕೃಷ್ಣ ಮಾತನಾಡಿ, ಚರಿತ್ರೆಯನ್ನು ಕೇವಲ ಅಂಕಗಳಿಸಲು ಅಭ್ಯಸಿಸದೇ, ವೈಜ್ಞಾನಿಕ ಮನೋಭಾ ವದಿಂದ ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಹಂಪಿ ಕನ್ನಡ ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಸಿ. ಮಹದೇವಪ್ಪ ಮಾತನಾಡಿ, ವಿವಿಯಲ್ಲಿ ಪಟ್ಟಣಗಳ ಚರಿತ್ರೆಯನ್ನು ಆಯಾ ಪಟ್ಟಣಗಳ ಜನತೆಗೆ ತಿಳಿಸಲು ಹಮ್ಮಿಕೊಂಡ ಕಾರ್ಯಕ್ರಮಗಳ ವಿವರ ನೀಡಿದರು.

ಎಸ್‌ಎಸಿ ಕಾಲೇಜಿನ ಪ್ರಾಂಶುಪಾಲ ಕೆ.ಎಂ. ಸ್ವಾಮಿಗೌಡ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎನ್. ಮಂಜುನಾಥ್, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎನ್.ಸಿ. ಶಿವಕುಮಾರ್, ಎಸ್‌ಎಸಿ ಕಾಲೇಜಿನ ಪರಂಪರೆ ಕೂಟದ ಸಂಚಾಲಕ ಪ್ರೊ. ಕೆ. ಪುಟ್ಟರಂಗಪ್ಪ, ಶಿಕ್ಷಕ ಕಲೀಮುಲ್ಲಾ, ತಾಲ್ಲೂಕು ಸಮಾಜ ವಿಜ್ಞಾನ ಬೋಧಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.