ADVERTISEMENT

ಸಾಕ್ಷರತೆ ಪ್ರಮಾಣ ಹೆಚ್ಚಳ: ದೇಶದ ಗಮನ ಸೆಳೆದ ಬ್ಯಾಡರಹಳ್ಳಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 8:05 IST
Last Updated 20 ಸೆಪ್ಟೆಂಬರ್ 2011, 8:05 IST

ಮಂಡ್ಯ: ಪಾಂಡವಪುರ ತಾಲ್ಲೂಕು ದೊಡ್ಡ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಸಾಕ್ಷರತೆ ಪ್ರಮಾಣದಲ್ಲಿ ಮುಂಚೂಣಿಯಲ್ಲಿದ್ದು ದೇಶದ ಗಮನ ಸೆಳೆದಿದೆ ಎಂದು ಜಿಲ್ಲಾ ಲೋಕ ಶಿಕ್ಷಣಾಧಿಕಾರಿ ಕೆ.ಕಾಳೇಗೌಡ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಸೋಮವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಾಕ್ಷರತಾ ಸಮಿತಿ ವತಿಯಿಂದ ಅಂತರರಾಷ್ಟ್ರೀಯ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಲ್ಲಿನ ಲೋಕ ಶಿಕ್ಷಣ ಸಮಿತಿ ಸಾಕ್ಷರತೆಯಲ್ಲಿ ಗರಿಷ್ಠ ಸಾಧನೆ ಮಾಡಿದೆ. ಇದನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಬಾರಿ ಪ್ರತಿಷ್ಠಿತ ಸತ್ಯನ್ ಮೈತ್ರಾ ಪ್ರಶಸ್ತಿಯನ್ನು ನೀಡಿರುವುದು ಈ ಗ್ರಾಪಂ ಹೆಗ್ಗಳಿಕೆ ಆಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಾಕ್ಷರತೆ ಬೆಳವಣಿಗೆ ಪ್ರಮಾಣದಲ್ಲಿ ನಿರೀಕ್ಷಿತ ಪ್ರಗತಿ ಆಗದಿದ್ದರೂ, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಸುಧಾರಿಸಲಿದೆ. ಸಾಕ್ಷರತೆ ಪ್ರಮಾಣ ವೃದ್ಧಿಸಲು ರೂಪಿಸಿರುವ ಹಲವು ಯೋಜನಗಳು ನೆರವಿಗೆ ಬರಲಿದೆ ಎಂದರು.

ಸಾಕ್ಷರತೆ ಪ್ರಮಾಣ ಹೆಚ್ಚಿದಾಗ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯನ್ನು ಗಮನಿಸಬಹುದು. ಗ್ರಾಮ ಮಟ್ಟದಲ್ಲಿ ಅನಕ್ಷರಸ್ಥರರಿಗೆ ಅಕ್ಷರದ ಬಗೆಗೆ ಅರಿವು ಮೂಡಿಸುತ್ತಿರುವ ಪ್ರೇರಕರ ಕೊಡುಗೆ ಸಾಕಷ್ಟಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ದೊಡ್ಡ ಬ್ಯಾಡರಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಲೋಕ ಶಿಕ್ಷಣ ಸಮಿತಿಯ ಸಣ್ಣಸ್ವಾಮೀಗೌಡ ಇದ್ದರು.  ಸಾಕ್ಷರತೆ ಬಗೆಗೆ ಜಾಗೃತಿ ಮೂಡಿಸಲು ಆಯೋಜಿಸಿದ್ದ ಜಾಥಾಗೆ ಶಾಸಕ ಎಂ.ಶ್ರೀನಿವಾಸ್ ಮತ್ತು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಅವರು ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.