ADVERTISEMENT

ಸಾಹಿತ್ಯ ಸಮಾಜಮುಖಿಯಾಗಲಿ: ವೀರಪ್ಪ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 9:05 IST
Last Updated 13 ಫೆಬ್ರುವರಿ 2012, 9:05 IST

ಮಂಡ್ಯ: `ಸಾಹಿತ್ಯ ಎಂಬುದು ಸಮಾಜದ ಪ್ರತಿಬಿಂಬ. ಅದು, ಸಂವೇದನಶೀಲವಾಗಿದ್ದು ಸಮಾಜಮುಖಿಯಾಗಿರಬೇಕು~ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಜಿ.ಟಿ.ವೀರಪ್ಪ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಭವನದಲ್ಲಿ ಭಾನುವಾರ ಮಂಡ್ಯ ತಾಲ್ಲೂಕು ಯುವ ಬರಹಗಾರರ ಬಳಗ ಆಯೋಜಿಸಿದ್ದ `ಜಿಲ್ಲಾ ಮಟ್ಟದ ಕವಿಗೋಷ್ಠಿ~ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜಕ್ಕೆ ಸ್ಪಂದಿಸುವಂತಹ ಸಾಹಿತ್ಯ ಬೇಕು ಎಂದು ಹೇಳಿದರು.

ಸಾಹಿತ್ಯ ಕೃಷಿಯಲ್ಲಿ ತೊಡಗುವವರಿಗೆ ಚಿಂತನ ಮಂಥನ ಬಹಳ ಮುಖ್ಯ. ಸಮಾಜದ ಆಶೋತ್ತರಗಳನ್ನು, ತುಡಿತ ಮಿಡಿತಗಳನ್ನು, ನಂಬಿಕೆಗಳನ್ನು, ಸತ್ಯ ಮತ್ತು ಮೌಲ್ಯಗಳನ್ನು ಒಳಹೊಕ್ಕಿ ಅಭಿವ್ಯಕ್ತಿಗೊಳಿಸುವ ಜೊತೆಗೆ, ಬರೆಯುವಂತಹ ಸಾಹಿತ್ಯವೂ ವಿಶ್ವಸನೀಯವಾಗಿರಬೇಕು ಎಂದು ಪ್ರತಿಪಾದಿಸಿದರು.

`ನಾವು ಗೀಚಿದ್ದು, ಬರೆದಿದ್ದೆಲ್ಲಾ ಶ್ರೇಷ್ಠ ಎನ್ನುವ ಭಾವನೆ ನಮ್ಮಲ್ಲಿರಬಾರದು. ಹೆಚ್ಚಿನ ಓದು, ಜೀವನಾನುಭವ, ಏಕಾಗ್ರತೆ ಬರವಣಿಗೆಗೆ ತೀರಾ ಅವಶ್ಯ. ಮೌಲ್ಯಯುತ ಮತ್ತು ಗುಣಮಟ್ಟದ ಬರಹಗಳು ಹೊಮ್ಮಿದಾಗ ಮಾತ್ರ ಮನ್ನಣೆ, ಗೌರವ ಸಿಗುತ್ತದೆ~ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, `ಸಮಾಜ ಮತ್ತು ಮನುಷ್ಯನನ್ನು ಆಹ್ಲಾದಕರವಾಗಿಡುವ ಶಕ್ತಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇದೆ. ಇದಕ್ಕಾಗಿ ಹೆಚ್ಚು ಹೆಚ್ಚು ಸಂಘಟನೆಗಳು ಅಸ್ತಿತ್ವಕ್ಕೆ ಬಂದರೂ ಯಾವುದೇ ತೊಂದರೆಯಿಲ್ಲ~ ಎಂದು ಹೇಳಿದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣದಿಂದ ದೂರವಿದ್ದಷ್ಟೂ ಸಮಾಜಕ್ಕೆ ಹಾನಿಕಾರಕ ಎಂದು ಪ್ರತಿಪಾದಿಸಿದ ಗೌಡರು, ಸೃಜನಶೀಲತೆ ಜೊತೆಗೆ ಬದುಕಿನ ಅನುಭವಗಳಿಗೆ ಅಕ್ಷರಗಳ ರೂಪಕೊಟ್ಟ ಸಾಹಿತ್ಯ, ಜನಸಾಮಾನ್ಯರ ಬಾಯಲ್ಲಿ ನಲಿದಾಗ ಕಾವ್ಯದ ನಿಜವಾದ ಜನಪ್ರಿಯತೆ ಅರಿಯಲು ಸಾಧ್ಯ ಎಂದರು.

ಸಾಹಿತಿ ತೈಲೂರು ವೆಂಕಟಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಯುವ ಬರಹಗಾರರ ಬಳಗದ ಜಿಲ್ಲಾಧ್ಯಕ್ಷ ಟಿ. ಸತೀಶ್ ಜವರೇಗೌಡ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ವಿ.ಭಕ್ತವತ್ಸಲ, ತಾಲ್ಲೂಕು ಘಟಕದ ಅಧ್ಯಕ್ಷ ಕೊತ್ತತ್ತಿ ರಾಜು, ಬಿ.ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.