ADVERTISEMENT

ಸೇತುವೆ ಮರುನಿರ್ಮಾಣ; ಪಾಲಿಕೆ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 10:34 IST
Last Updated 10 ಏಪ್ರಿಲ್ 2018, 10:34 IST
ಮೈಸೂರಿನ ಬೋಗಾದಿ ರಸ್ತೆಯಲ್ಲಿ ಮಳೆನೀರು ಚರಂಡಿಗೆ ನಿರ್ಮಿಸುತ್ತಿರುವ ಸೇತುವೆ
ಮೈಸೂರಿನ ಬೋಗಾದಿ ರಸ್ತೆಯಲ್ಲಿ ಮಳೆನೀರು ಚರಂಡಿಗೆ ನಿರ್ಮಿಸುತ್ತಿರುವ ಸೇತುವೆ   

ಮೈಸೂರು: ಇಲ್ಲಿನ ಮಾನಸಗಂಗೋತ್ರಿ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್‌) ನಡುವಿನ ಮಳೆನೀರು ಚರಂಡಿಗೆ ಬೋಗಾದಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸೇತುವೆಯ ಕಾಮಗಾರಿ ಕಳಪೆಯಾಗಿದೆ ಎಂಬುದು ಮಹಾನಗರ ಪಾಲಿಕೆಯ ಗಮನಕ್ಕೆ ಬಂದರೂ ಕೆಲಸ ಸ್ಥಗಿತಗೊಂಡಿಲ್ಲ.

ಕಾಮಗಾರಿ ಪರಿಶೀಲನೆ ನಡೆಸಿದ ಉಪ ಆಯುಕ್ತ (ಅಭಿವೃದ್ಧಿ) ಎಂ.ಕೆ.ಭಾಸ್ಕರ ಅವರು ತಾಂತ್ರಿಕ ದೋಷಗಳನ್ನು ಗುರುತಿಸಿ ಕಳಪೆ ಎಂಬುದನ್ನು ಋಜುವಾತು ಮಾಡಿದ್ದರು. ಇದರ ಆಧಾರದ ಮೇರೆಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಹಾಯಕ ಎಂಜಿನಿಯರ್‌ ಎಂ.ಬಿ.ನಂದೀಶ್‌ ವಿರುದ್ಧ ಶಿಸ್ತುಕ್ರಮ ಕೈಗೊಂಡಿರುವ ಪಾಲಿಕೆ ಅಧಿಕಾರಿಗಳು, ಕಾಮಗಾರಿ ತಡೆಯುವಲ್ಲಿ ಸಫಲರಾಗಿಲ್ಲ.

ಬೋಗಾದಿ ರಸ್ತೆಯನ್ನು ಜೆಎಲ್‌ಬಿ ರಸ್ತೆಯ ಜಂಕ್ಷನ್‌ನಿಂದ ರಿಂಗ್‌ ರಸ್ತೆಯವರೆಗೆ ಅಭಿವೃದ್ಧಿಪಡಿಸಲು ವಿಶೇಷ ಅನುದಾನದಲ್ಲಿ ₹ 8
ಕೋಟಿಯನ್ನು ಮಂಜೂರು ಮಾಡಲಾಗಿತ್ತು. ಪಿ.ಕೆ.ಕೃಷ್ಣರಾಜು ಎಂಬುವರು ಕಾಮಗಾರಿಯ ಗುತ್ತಿಗೆ ಪಡೆದಿದ್ದು, 2017ರ ಜೂನ್‌ನಿಂದ ಕೆಲಸ
ನಡೆಯುತ್ತಿದೆ.

ADVERTISEMENT

ರಸ್ತೆಯನ್ನು ಎಡ ಹಾಗೂ ಬಲ ಭಾಗದಲ್ಲಿ ವಿಸ್ತರಿಸಿ, ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಮಾನಸಗಂಗೋತ್ರಿಯ ಸಮೀಪ ನಿರ್ಮಾಣಗೊಳ್ಳುತ್ತಿದ್ದ ಸೇತುವೆಯ ಗುಣಮಟ್ಟಕ್ಕೆ ಸಂಬಂಧಿಸಿ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದರಿಂದ ಸ್ಥಳ ಪರಿಶೀಲನೆ ನಡೆಸಿ ವರದಿ
ನೀಡಲು ಉಪ ಆಯುಕ್ತರಿಗೆ ಸೂಚಿಸಲಾಗಿತ್ತು.

‘ಪರಿಶೀಲನೆಯ ವೇಳೆ ತಾಂತ್ರಿಕ ದೋಷ ಇರುವುದು ಕಂಡುಬಂದಿದೆ. ಮುಂದೆ ಆಗಬಹುದಾದ ಹಾನಿಯನ್ನು ತಡೆಯಲು ಮರುನಿರ್ಮಾಣ ಮಾಡುವುದು ಸೂಕ್ತ’ ಎಂದು ಉಪ ಆಯುಕ್ತರು ವರದಿಯಲ್ಲಿ ಶಿಫಾರಸು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.