ADVERTISEMENT

ಸ್ಯಾನಿಟರಿ ನ್ಯಾಪ್ಕಿನ್‌ಗಳಲ್ಲಿ ಪ್ಲಾಸ್ಟಿಕ್‌: ಎಚ್ಚರಿಕೆ

ಹೆಣ್ಣುಮಕ್ಕಳ ಆರೋಗ್ಯ ಸಮಸ್ಯೆ; ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 20 ಮೇ 2018, 13:25 IST
Last Updated 20 ಮೇ 2018, 13:25 IST

ಮಂಡ್ಯ: ‘ಸ್ಯಾನಿಟರಿ ನ್ಯಾಪ್ಕಿನ್‌ಗಳಲ್ಲಿ ಪ್ಲಾಸ್ಟಿಕ್‌ ಅಂಶವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಹೆಣ್ಣು ಮಕ್ಕಳು ಈ ನ್ಯಾಪ್ಕಿನ್‌ಗಳ ಮೇಲೆ ಹೆಚ್ಚಾಗಿ ಅವಲಂಬಿತರಾಗಬಾರದು. ಋತು ಚಕ್ರದ ಸಮಯದಲ್ಲಿ ಶುಭ್ರ ಬಟ್ಟೆ ಬಳಸುವುದನ್ನು ರೂಢಿಸಿಕೊಳ್ಳಬೇಕು’ ಎಂದು ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯರ ಸಂಘದ ಅಧ್ಯಕ್ಷೆ ಡಾ.ಶೋಭಾ ಎನ್. ಗುಡಿ ಸಲಹೆ ನೀಡಿದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸ್ತ್ರೀರೋಗ ವೈದ್ಯರ ಸಂಘದ ವತಿಯಿಂದ ಶನಿವಾರ ನಡೆದ ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಪ್ರಸೂತಿ ಆರೋಗ್ಯ ಸಮಸ್ಯೆಗಳ ಕುರಿತ ಮುಂದುವರಿದ ವೈದ್ಯಕೀಯ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸ್ಯಾನಿಟರಿ ನ್ಯಾಪ್ಕಿನ್‌ಗಳಲ್ಲಿ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂದು ಅಧ್ಯಯನದಲ್ಲಿ ಪತ್ತೆ ಮಾಡಲಾಗಿದೆ. ಈ ಬಗ್ಗೆ ಹೆಣ್ಣುಮಕ್ಕಳು ಎಚ್ಚರ ವಹಿಸಬೇಕು. ಹಲವು ಕಾರ್ಯಕ್ರಮ ಆಯೋಜನೆ ಮಾಡಿ ಅರಿವು ಮೂಡಿಸಬೇಕು. ನ್ಯಾಪ್ಕಿನ್‌ ಬಳಸುವುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಬಿಸಾಡುವುದರಿಂದ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಅವುಗಳ ಮೇಲೆ ಅವಲಂಬಿತರಾಗುವ ಬದಲು ಬಳಕೆಯ ಮೇಲೆ ನಿಯಂತ್ರಣ ಸಾಧಿಸಬೇಕು’ ಎಂದು ಹೇಳಿದರು.

ADVERTISEMENT

‘14 ರಿಂದ 18 ವರ್ಷ ವಯಸ್ಸಿನ ಹೆಣ್ಣುಮಕ್ಕಳ ಋತುಚಕ್ರಗಳಲ್ಲಿ ಆಗುವ ವ್ಯತ್ಯಾಸದಿಂದ ದೈಹಿಕ, ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಖಿನ್ನತೆಗೆ ಒಳಗಾಗುವ ಅಪಾಯವಿರುತ್ತದೆ. ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಅವಶ್ಯಕತೆ ಇದೆ’ ಎಂದು ಹೇಳಿದರು.

ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಹನುಮಂತಪ್ರಸಾದ್ ಮಾತನಾಡಿ ‘ಸ್ತ್ರೀರೋಗದ ಬಗ್ಗೆ ವಿಸ್ತ್ರತ ಚರ್ಚೆ ನಡೆಯುವುದು ಅವಶ್ಯಕ. ಹದಿಹರೆಯದ ಹೆಣ್ಣುಮಕ್ಕಳು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣ ನಿರ್ಮಾಣಗೊಳ್ಳಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ಕಾರ್ಯಾಗಾರ ಆಯೋಜನೆ ಮಾಡುವುದು ಒಳ್ಳೆಯದು’ ಎಂದು ಹೇಳಿದರು.

ಸ್ತ್ರೀರೋಗ ಮತ್ತು ಪ್ರಸ್ತೂತಿ ವಿಭಾಗದ ಮುಖ್ಯಸ್ಥೆ ಡಾ.ಎಸ್.ಸಿ.ಸವಿತಾ, ಮಂಡ್ಯ ಜಿಲ್ಲಾ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ಸಂಘದ ಅಧ್ಯಕ್ಷೆ ಡಾ.ಬಿ.ಎನ್.ಪ್ರಭಾವತಿ, ತಜ್ಞ ವೈದ್ಯರಾದ ಡಾ. ಬಿ.ಕೆ.ಸುರೇಶ್, ಡಾ.ವಸುಮತಿ ಎಸ್. ರಾವ್, ಡಾ.ಮನೋಹರ್, ಡಾ.ಸಂಜಯ್‌ ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.