ADVERTISEMENT

ಹಣ ದುರುಪಯೋಗ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 6:49 IST
Last Updated 19 ಜುಲೈ 2013, 6:49 IST

ಶ್ರೀರಂಗಪಟ್ಟಣ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ಕ್ಕಾಗಿ ಪಾಲಿಸಿದಾರರಿಂದ ಹಣ ಸಂಗ್ರಹಿಸುತ್ತಿದ್ದ ಸ್ವಯಂ ಸೇವಾ ಸಂಸ್ಥೆಯೊಂದು ಪಾಲಿಸಿದಾರರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ನಷ್ಟ ಅನುಭವಿಸಿರುವ ಪಾಲಿಸಿದಾರರಿಗೆ ಎಲ್‌ಐಸಿ ಕಂಪೆನಿ ಹಣ ತುಂಬಿಕೊಡಬೇಕು ಎಂದು ಆಗ್ರಹಿಸಿ ಪಾಲಿಸಿದಾರರು ಹಾಗೂ ಉಪ ಏಜೆಂಟ್‌ಗಳು ಶ್ರೀರಂಗಪಟ್ಟಣ ಎಲ್‌ಐಸಿ ಶಾಖೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ವಿಕಸನ ಸ್ವಯಂ ಸೇವಾ ಸಂಸ್ಥೆ ಹಾಗೂ ಎಲ್‌ಐಸಿ ಕಂಪೆನಿಯ ವಿರುದ್ಧ ಘೋಷಣೆ ಕೂಗಿದರು. ಎಲ್‌ಐಸಿ ಕಂಪೆನಿ ಬಡ ಜನರಿಗೆ ಮೈಕ್ರೋ ಇನ್ಶೂರೆನ್ಸ್ ಹೆಸರಿನ ಪಾಲಿಸಿ ಪರಿಚಯಿಸಿತ್ತು. ಈ ಯೋಜನೆಗೆ ಕಮೀಷನ್ ಆಧಾರದಲ್ಲಿ ಪ್ರೀಮಿಯಂ ಹಣ ಸಂಗ್ರಹಿಸಲು ಮಂಡ್ಯ ವಿಕಸನ ಹೆಸರಿನ ಸ್ವಯಂ ಸೇವಾ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ ಜನರಿಂದ ಸಂಗ್ರಹಿಸಿದ ಹಣವನ್ನು ಸ್ವಯಂ ಸೇವಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮಕ್ಕೆ ಪಾವತಿಸಿಲ್ಲ. ಇದರಿಂದ ಪಾಲಿಸಿದಾರರಿಗೆ ನಷ್ಟ ಉಂಟಾಗಿದ್ದು ನಷ್ಟವನ್ನು ತುಂಬಿಕೊಡಬೇಕು ಎಂದು ವಸಂತಮ್ಮ ಇತರರು ಒತ್ತಾಯಿಸಿದರು.

  ಮೈಕ್ರೋ ಇನ್ಶೂರೆನ್ಸ್ ಪಾಲಿಸಿಗೆ ವಿಕಸನ ಸಂಸ್ಥೆ 2008ರಿಂದ ಹಣ ಸಂಗ್ರಹಿಸಿದೆ. ಪ್ರೀಮಿಯಂ ಹಣ ಸಂಗ್ರಹಿಸಲು ಅಂಗನವಾಡಿ ಕಾರ್ಯಕರ್ತರು ಇತರರನ್ನು ಉಪ ಏಜೆಂಟ್‌ಗಳನ್ನಾಗಿ ನೇಮಿಸಿ ಕೊಳ್ಳಲಾಗಿತ್ತು. ಸ್ವಯಂ ಸೇವಾ ಸಂಸ್ಥೆ ಮಾಡಿರುವ ವಂಚನೆ ಮಾಡಿರುವುದರಿಂದ ಪಾಲಿಸಿದಾರರು ಉಪ ಏಜೆಂಟ್‌ಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜೀವ ವಿಮಾ ನಿಗಮ ಮಧ್ಯೆ ಪ್ರವೇಶಿಸಿ ಪಾಲಿಸಿದಾರರು ಪಾವತಿಸಿರುವ ಹಣವನ್ನು ಅವರ ಖಾತೆಗೆ ಜಮೆಮಾಡಬೇಕು. ಹಣ ದುರುಪಯೋಗ ಮಾಡಿಕೊಂಡಿ ರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ಚಂದಗಾಲು ಶಂಕರ್ ಇತರರು ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಎಲ್‌ಐಸಿ ಶಾಖೆಯ ಮ್ಯಾನೇಜರ್ ರಮೇಶ್ ಬಾಬು, ವಿಕಸನ ಸಂಸ್ಥೆಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಸಲಾಗಿದೆ. ಪಾಲಿಸಿದಾರರಿಗೆ ಹಣ ತುಂಬಿಕೊಡುವ ಕುರಿತು ವಿಭಾಗೀಯ ಕಚೇರಿಯ ಮುಖ್ಯಸ್ಥರ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಹೇಮಂತ್‌ಕುಮಾರ್, ಸಂಜಯ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.