ಮಂಡ್ಯ: ತಾಲ್ಲೂಕಿನ ಸಂತೆಕಸಲಗೆರೆ ಗ್ರಾಮದ ಶಕ್ತಿ ದೇವತೆ ಚೌಡೇಶ್ವರಿ ಅಮ್ಮನವರ `ಸಿಡಿ~ ಉತ್ಸವವು ಶ್ರದ್ಧಾ ಭಕ್ತಿಯಿಂದ ಬುಧವಾರ ನೆರವೇರಿತು. ಅತ್ಯಂತ ವಿಜೃಂಭಣೆಯಿಂದ ನಡೆದ ದ್ವೈವಾರ್ಷಿಕ ಉತ್ಸವಕ್ಕೆ ಅಸಂಖ್ಯ ಭಕ್ತರು ಸಾಕ್ಷಿಯಾದರು.
ಮಧ್ಯಾಹ್ನ 1.40ಕ್ಕೆ ಸಿಳ್ಳಪ್ಪನ್ನು ಕಂಬಕ್ಕೆ ಬಿಗಿದು, ಮೇಲಕ್ಕೇರಿಸುತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಸಿಳ್ಳಪ್ಪನತ್ತ ಹಣ್ಣು-ಜವನವನ್ನು ತೂರುತ್ತಾ ತಮ್ಮ ಹರಕೆಯನ್ನು ಭಕ್ತರು ಸಮರ್ಪಿಸಿದರು. ಚೌಡೇಶ್ವರಿ ದೇಗುಲದಲ್ಲಿ ಬೆಳಿಗ್ಗೆಯಿಂದಲೂ ವಿಶೇಷ ಪೂಜೆ-ಪುನಸ್ಕಾರ ಸಾಂಗವಾಗಿ ನೆರವೇರಿತು.
ಕಾರಸವಾಡಿ, ದೇವಿಪುರ, ಮೊತ್ತಹಳ್ಳಿ, ಮಂಗಲ, ಹನಿಯಂಬಾಡಿ ಸೇರಿದಂತೆ ಆಸುಪಾಸಿನ ಗ್ರಾಮಗಳ ಜನರು ತಂಡೋಪ ತಂಡವಾಗಿ ಆಗಮಿ ಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಸಮಾಜ ಸೇವೆಗೆ ಸಲಹೆ
ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಸೇವೆ ಸಲ್ಲಿಸಬೇಕು ಎಂದು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಎಸ್.ಆರ್. ಸಾವಿತ್ರಿ ತಿಳಿಸಿದರು.
ಮಂಡ್ಯ ತಾಲ್ಲೂಕಿನ ಮುದ್ದುಂಗೆರೆ ಯಲ್ಲಿ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿದ ಮಾತನಾಡಿದರು. ಎನ್‌ಎಸ್‌ಎಸ್ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಗ್ರಾಮೀಣ ನಿವಾಸಿಗಳಲ್ಲಿ ಸಾಕ್ಷರತೆ, ಸ್ವಚ್ಛತೆ, ಆರೋಗ್ಯದ ಅರಿವು ಮೂಡಿಸಬೇಕು ಎಂದರು.
ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು ಪ್ರತಿ ವರ್ಷ ಹಳ್ಳಿಗಳಿಗೆ ತೆರಳಿ ವಾಕ್, ಶ್ರವಣ ದೋಷದ ಸಮೀಕ್ಷೆ ನಡೆಸಿ, ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಚಿತ ಚಿಕಿತ್ಸೆ, ಸಲಹೆ ಮತ್ತು ಶ್ರವಣದೋಷ ಉಪ ಕರಣ ವಿತರಿಸಲಿದೆ ಎಂದರು.
ಈ ವರ್ಷ ತಾಲ್ಲೂಕಿನ ಕೀಲಾರ ಆಸುಪಾಸಿನ 20 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿದ್ದು, ಮಾರ್ಚ್ 9 ರಂದು ಕೀಲಾರದಲ್ಲಿ ಉಚಿತ ಚಿಕಿತ್ಸೆ ಹಾಗೂ ಉಪಕರಣ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಮಂಜುಳಾ, ಕ್ಷೀರಸಾಗರ ಮಿತ್ರ ಕೂಟದ ಅಧ್ಯಕ್ಷ ಕೆ.ಜಯ ಶಂಕರ್, ಬಿ.ಶಿವರಾಜ್, ಕೃಷ್ಣೇಗೌಡ ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.