ADVERTISEMENT

ಹಸಿರು ಶಾಲೆಯ ಪರಿಸರ ಪಾಠ...!

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 5:35 IST
Last Updated 15 ಜೂನ್ 2013, 5:35 IST
ಹಸಿರು ಶಾಲೆಯ ಪರಿಸರ ಪಾಠ...!
ಹಸಿರು ಶಾಲೆಯ ಪರಿಸರ ಪಾಠ...!   

ಮಂಡ್ಯ: ಮಲೆನಾಡಿನ ಶಾಲೆಗಳನ್ನೂ ಮೀರಿಸುವಂತೆ ಹಸಿರಿನಿಂದ ನಳನಳಿಸುತ್ತಿರುವ ಸರ್ಕಾರಿ ಶಾಲೆಯೊಂದು, ನಗರದ ಸೆರಗಿನಂಚಿನಲ್ಲಿದೆ. ಇದು, ಬರೀ ಶಾಲೆಯಲ್ಲ, ಪರಿಸರ ಪಾಠವನ್ನೇಳುವ ಹಸಿರು ಶಾಲೆ..!

ಅದು, ಮಂಡ್ಯ ಶಂಕರಪುರದ (ಸಂತೆ ಮೈದಾನ) ಸರ್ಕಾರಿ ಪ್ರೌಢಶಾಲೆ. ಶಾಲಾ ಅಂಗಳ ಹಸಿರಿನಿಂದ ಹಾಸಿದೆ. ಚೆಂದದ ಶಾಲೆ ಹೇಗಿರಬೇಕು ಎನ್ನುವುದಕ್ಕೆ ಮಾದರಿ. ಈ ಶಾಲೆ ಮುಕುಟಕ್ಕೆ 2012-13ನೇ ಸಾಲಿನ `ಜಿಲ್ಲಾ ಅತ್ಯುತ್ತಮ ಹಸಿರು ಶಾಲೆ' ಪ್ರಶಸ್ತಿಯ ಗೌರವವೂ ದೊರಕಿದೆ. 

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 148 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ 78 ಬಾಲಕರು, 70 ಬಾಲಕಿಯರಿದ್ದಾರೆ. ಶಾಲೆಯ ಪರಿಸರದಲ್ಲಿ ಪ್ರಶಾಂತ, ಆಹ್ಲಾದಕರ ವಾತಾವರಣ ಇದೆ. ಕೊಠಡಿಯಲ್ಲದೇ, ಪರಿಸರದಲ್ಲೂ ಪಾಠ ಹೇಳುವುದು ಇಲ್ಲಿನ ವಿಶೇಷ !

ಮಕ್ಕಳೇ ಎಲ್ಲಾ..!: ಶಾಲಾ ಆವರಣದಲ್ಲಿ ತೆಂಗು, ತೇಗ, ಬೇವು, ಸಿಲ್ವರ್ ಓಕ್, ಬಾಗೇ, ಅರಳಿ, ಹಲಸು, ಸೀಬೆ, ಪರಂಗಿ, ಬಾಳೆ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಮರಗಿಡಗಳಿವೆ. ಈ ಮರಗಿಡಗಳ ಪೋಷಣೆ ಜವಾಬ್ದಾರಿಯನ್ನು ಪ್ರತಿ ವಿದ್ಯಾರ್ಥಿಗೂ ವಹಿಸಲಾಗಿದೆ. ಮಕ್ಕಳು ಗಿಡಗಳಿಗೆ ನೀರುಣಿಸಿ, ಗೊಬ್ಬರ ಕೊಟ್ಟು ಜತನದಿಂದ ಕಾಪಾಡಿಕೊಂಡು ಬರುತ್ತಿದ್ದಾರೆ.

ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಲೆಂದು ಅಲ್ಲಲ್ಲಿ ಕಲ್ಲು ಚಪ್ಪಡಿ ಹಾಸಲಾಗಿದೆ. ಪ್ರತಿ ತರಗತಿಗೆ ವಾರದಲ್ಲಿ ಮೂರು ಅವಧಿ ತೋಟಗಾರಿಕೆ ಬಗ್ಗೆ ಪಾಠ ಹೇಳಲಾಗುತ್ತಿದೆ. ಮಕ್ಕಳೇ, ಗುದ್ದಲಿ, ಕುಡುಗೋಲು, ಹಾರೆ, ಕೋಲು ಗುದ್ದಲಿ ಹಿಡಿದು ರೈತರಂತೆ ಬೆವರು ಸುರಿಸುತ್ತಾರೆ. ಅವರ ಶ್ರಮ, ಹಸಿರು ಮೂಲಕ ಪ್ರತಿಫಲಿಸುತ್ತಿದೆ.

`ಬಿಸಿಯೂಟಕ್ಕೆ ಬೇಕಾದ ಸೊಪ್ಪು, ತರಕಾರಿಯನ್ನೂ ಬೆಳೆಯುತ್ತವೆ. ಆದರೆ, ಈಗಷ್ಟೇ ಶಾಲೆ ಆರಂಭವಾಗಿದ್ದು, ಸಸಿಮಡಿಗಳನ್ನು ಸಿದ್ಧ ಮಾಡಿಕೊಳ್ಳುತ್ತಿದ್ದೇವೆ' ಎನ್ನುತ್ತಾರೆ ತೋಟಗಾರಿಕೆ ಶಿಕ್ಷಕ ಅಂಕಯ್ಯ.

ಔಷಧಿ ವನ...: ಸರ್ಪಗಂಧ, ಪಚೋಲಿ, ರಾತ್ರಿರಾಣಿ, ದೊಡ್ಡಪತ್ರೆ, ಮಧು, ಲೋಳೆರಸ, ಅಮೃತಬಳ್ಳಿ, ಸ್ಟೀವಿಯಾ, ಪುದಿನಾ, ತುಂಬೆ, ಬ್ರಾಹ್ಮಿ, ಲಕ್ಕಿ, ಕಾಸಿ ಗಣಗಲೆ, ಮಂಗರವಳ್ಳಿ ಸೇರಿದಂತೆ ಅನೇಕ ಔಷಧೀಯ ಗುಣವಿರುವ ಸಸ್ಯಗಳನ್ನು ಬೆಳಸಲಾಗಿದ್ದು, ಈ ಗಿಡಗಳ ಮಹತ್ವವನ್ನೂ ವಿದ್ಯಾರ್ಥಿಗಳಿಗೆ ಹೇಳಿ ಕೊಡಲಾಗುತ್ತಿದೆ.

ಇಕೋ ಕ್ಲಬ್, ವಿಜ್ಞಾನ-ಕಲಾ-ಕನ್ನಡ ಹಾಗೂ ಕ್ರೀಡಾ ಸಂಘಗಳನ್ನು ತೆರೆಯಲಾಗಿದೆ. ಗ್ರಂಥಾಲಯದ ಮುಕ್ತ ಬಳಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

`ಪಠ್ಯ ವಿಷಯಗಳ ಜೊತೆಗೆ ಕಂಪ್ಯೂಟರ್ ಶಿಕ್ಷಣ, ಹದಿ ಹರೆಯದ ಶಿಕ್ಷಣ, ಯೋಗಾ, ಪ್ರಾಣಾಯಾಮ ಬಗೆಗೂ ಹೇಳಿಕೊಡಲಾಗುತ್ತಿದೆ. ವೃತ್ತಿ ಮಾರ್ಗದರ್ಶನ ಶಿಕ್ಷಣವನ್ನೂ ನೀಡುತ್ತಿದ್ದೇವೆ. ಎಸ್‌ಡಿಎಂಸಿ ಕಮಿಟಿ ಮತ್ತು ಸಹ ಶಿಕ್ಷಕರ ನೆರವಿಂದ ಇಷ್ಟೆಲ್ಲಾ ಸಾಧ್ಯವಾಗುತ್ತಿದೆ' ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಡಿ. ರಾಜೇಗೌಡ.

ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ತಲಾ 10 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನಿಯೋಜಿಸಲಾಗಿದೆ.
ವಿಶೇಷ ತರಗತಿ, ಗುಂಪು ಅಧ್ಯಯನ, ಚರ್ಚೆ; ರಸಪ್ರಶ್ನೆ, ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವುದು ಸೇರಿದಂತೆ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ.

ಶೈಕ್ಷಣಿಕ ಕ್ರಾಂತಿ...!: ಎಸ್ಸೆಸ್ಸೆಲ್ಸಿ ಫಲಿತಾಂಶದ ಗ್ರಾಫ್ ಕೂಡ ಏರುತ್ತಲೇ ಇದೆ. 2004-05ನೇ ಸಾಲಿನಲ್ಲಿ ಶೇ 47ರಷ್ಟಿದ್ದ ಫಲಿತಾಂಶ, ನಂತರದ ಶೈಕ್ಷಣಿಕ ವರ್ಷಗಳಲ್ಲಿ ಕ್ರಮವಾಗಿ ಶೇ 48, ಶೇ 64, ಶೇ 66, ಶೇ 71, ಶೇ 68, ಶೇ 74, ಶೇ 76 ಪಡೆದಿದೆ. ಈ ವರ್ಷ ಶೇ 89ರಷ್ಟು ಫಲಿತಾಂಶ ಬಂದಿದೆ.
ತೋಟಗಾರಿಕೆ ಶಿಕ್ಷಕ ಅಂಕಯ್ಯ, ಸಹ ಶಿಕ್ಷಕರಾದ ಕೆ. ನಾಗರಾಜು, ಎಸ್. ಜವರೇಗೌಡ, ವಿ.ಟಿ. ರಘುನಾಥ್, ಲಿಲ್ಲಿ ಸಗಾಯ ಮೇರಿ, ಎಂ. ರೂಪಾ, ಜೆಸ್ಸಿ ಮೆನೇಜ್ ಅವರನ್ನು ಒಳಗೊಂಡ ಶಿಕ್ಷಕ ಪಡೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.