ADVERTISEMENT

ಹಾಸ್ಯ, ನೃತ್ಯ, ಸಂಗೀತ ಮಾರ್ಧುಯದ ಹೊಳೆಯಲ್ಲಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 11:10 IST
Last Updated 12 ಸೆಪ್ಟೆಂಬರ್ 2011, 11:10 IST

ಮಳವಳ್ಳಿ: ಎರಡು ದಿನ ಜರುಗಿದ ಜಲಪಾತೋತ್ಸವಕ್ಕೆ ಭಾನುವಾರ ದೂರದ ಊರುಗಳ ಪ್ರವಾಸಿಗರೂ ಸೇರಿದಂತೆ ಸ್ಥಳೀಯ ಜನರ ಪ್ರವಾಹವೇ ಹರಿಯಿತು.

ಚೆಲ್ಲಿದ ಜನಪದ ಘಮಲು: ನೆಲಮೂಲ ಸಂಸ್ಕೃತಿಯಾದ ಜನಪದದ ಸಾಲುಸಾಲು ಹಾಡುಗಳು ಮುಸ್ಸಂಜೆಗೆ ಕಳೆಕಟ್ಟಿದ್ದವು. ಗಾಯಕರ ಕಂಠಸಿರಿಯಲ್ಲಿ ಲಯಬದ್ಧವಾಗಿ ಹೊರಹೊಮ್ಮಿದ ಜನಪದ ಗೀತೆಗಳ ಗುಚ್ಛವು ಸಂಚಲನ ಮೂಡಿಸಿತು.

ಅಪ್ಪಗೆರೆ ತಿಮ್ಮರಾಜು, ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡ ಪ್ರಸ್ತುತಪಡಿಸಿದ `ತಿಂಗಳು ಮುಳಿಗಿದವೋ ರಂಗೋಲಿ ಬೆಳಗಿದವೋ...~, `ಎಲ್ಲೋ ಜೋಗಪ್ಪ ನಿನ್ನ ಅರಮನೆ...~ `ಚೆಲ್ಲಿದರು ಮಲ್ಲಿಗೆಯ...~  ಸೇರಿಂದತೆ ಅನೇಕ ಗೀತೆಗಳು ಜನ ಮನಗೆದ್ದು, ಜನಪದ ಘಮಲನ್ನು ಹರಡಿದವು.

ಹೊನಲಾಗಿ ಹರಿದ ಹಾಸ್ಯ: ಕಲಾವಿದರಾದ ಉಮೇಶ್, ಹೊನ್ನವಳ್ಳಿ ಕೃಷ್ಣ, ಅಪೂರ್ವ ಪ್ರಸ್ತುತಪಡಿಸಿದ 25 ಕಿಸ್ಸಸ್ ಕಿರು ನಾಟಕ ನಗೆಯ ಹೊಳೆ ಹರಿಸಿತು. ಪಂಚಿಂಗ್ ಡೈಲಾಗ್‌ಗಳಿಗೆ ಜನಸ್ತೋಮ ಚಪ್ಪಾಳೆ ತಟ್ಟಿ ಸಂಭ್ರಮಿಸಿತು.

ಬೆಳಕಿನ ಚಿತ್ತಾರ: ಸಿಡಿಮದ್ದುಗಳು, ಬಾಣ ಬಿರುಸುಗಳ ಆರ್ಭಟ ಜೋರಾಗಿಯೇ ಇತ್ತು. ಕಲಾವಿದರು ವೀಕ್ಷಕರ ಮನದಲ್ಲಿ ರಂಗೋಲಿ ಬಿಡಿಸಿದರೆ, ಸಿಡಿಮದ್ದಗಳು ಬಾನಂಗಳದಿ ಬೆಳಕಿನ ಚಿತ್ತಾರ ಬಿಡಿಸಿದವು.

ತಾಳ-ವಾದ್ಯ, ಲಯ-ಲಹರಿ, ಜನಪದ ಹಾಡುಗಳು, ನೃತ್ಯ, ಭಾವಗೀತೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರವಣಿಗೆಯು ಜನಸಮೂಹವನ್ನು ರಂಜಿಸಿದವು. ವಿದ್ಯುತ್ ದೀಪದ ಬೆಳಕಿನಲ್ಲಿ ದೃಶ್ಯಕಾವ್ಯ ಬರೆದ ಜಲಧಾರೆಯ ವೈಭವಕ್ಕೆ ಜನತೆ ಪುಳಕಿತರಾದರು.

ದೃಷ್ಟಿನೆಟ್ಟು, ಮೈಮರೆತಿದ್ದ ವೀಕ್ಷಕರು ಜಲರಾಶಿಯ ನರ್ತನದಲ್ಲಿ ಮಿಂದೆದ್ದರು. ಕೆಲವರು ಕವಿಗಳೂ ಆದರು.
ಬೇಸಿಗೆಯಲ್ಲಿ ತನ್ನ ವೈಭವ ಕಳೆದುಕೊಳ್ಳುತ್ತಿದ್ದ ಕಾವೇರಿ ಮೈದುಂಬಿ ಹರಿದಳು. ವಿದ್ಯುತ್ ದೀಪದ ಬಣ್ಣ ಬಣ್ಣದ ಚಿತ್ತಾರದಲ್ಲಿ ಬಳಕುತ್ತಾ ಪ್ರಕೃತಿ ಆರಾಧಕರ ಹೃದಯ ತಣಿಸಿದಳು.

ಅಭಿವೃದ್ಧಿಯೂ ಆಗಬೇಕು: `ಕೆಲಸದ ಒತ್ತಡ, ಕಾಂಕ್ರಿಟ್ ಕಟ್ಟಡಗಳ ಮಧ್ಯಯೇ ಕಳೆದು ಹೋಗುವ ನಮಗೆ ಜಲಪಾತೋತ್ಸವ ಖುಷಿ ನೀಡಿದೆ. ಎರಡು ದಿನದ ಉತ್ಸವವೇನೋ ಆಯಿತು. ಇಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಜನರು ಮತ್ತೆ ಮತ್ತೆ ಬರುವಂತಾಗಬೇಕು~ ಎಂದು ಎಂಜಿನಿಯರ್ ಎ.ಆರ್.ಚಂದನಾ ಪ್ರತಿಕ್ರಿಯಿಸಿದರು.

 `ವಿದ್ಯುತ್ ಬೆಳಕಿನಲ್ಲಿ ಜಲಧಾರೆ ನೋಡಿ ಸುಖಿಸುವುದೇ ಭಿನ್ನ ಅನುಭವ. ಇಂಥ ಉತ್ಸವಗಳು ಹಾಗಾಗ ನಡೆಯಲಿ. ಈ ಸ್ಥಳ ಮತ್ತಷ್ಟು ಅಭಿವೃದ್ಧಿಯಾದರೆ ಜಿಲ್ಲೆಗೂ ಹೆಸರು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಆಲೋಚಿಸಬೇಕು~ ಎಂದು ಉದ್ಯಮಿ ಆರ್. ಮನೋಹರ್ ಪ್ರತಿಕ್ರಿಯಿಸಿದರು.

ಲಘು ಉಪಾಹಾರ ವ್ಯವಸ್ಥೆ: ಆಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಜನರಿಗೆ ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಮೊಸರನ್ನ, ತರಕಾರಿ ಬಾತು, ಸಿಹಿ ತಿಂಡಿ ನೀಡಲಾಯಿತು. ಶೌಚಾಲಯಕ್ಕೆ ಬಯಲನ್ನೇ ಜನರು ಆಶ್ರಯಿಸಬೇಕಾಯಿತು. ಬಸ್‌ಗಳನ್ನೇ ನಂಬಿ ಬಂದಿದ್ದ ಜನತೆ ಮನೆ ಸೇರಲು ಪರಿತಪಿಸುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.