ADVERTISEMENT

‘ಧರ್ಮ ಅರಿತರೆ ಮೃಗೀಯ ಭಾವನೆ ನಾಶ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 6:45 IST
Last Updated 17 ಮಾರ್ಚ್ 2014, 6:45 IST

ನಾಗಮಂಗಲ: ‘ಧರ್ಮ ಪ್ರಚಾರ ಎಂದರೆ ಮನುಷ್ಯನಲ್ಲಿ ಅಡಕವಾಗಿರುವ ಮೃಗೀಯ ಭಾವಗಳನ್ನು ದೈವೀಭಾವವನ್ನಾಗಿ ಪರಿವರ್ತಿಸುವ ಕ್ರಿಯೆ’ ಎಂದು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ತಾಲ್ಲೂಕಿನ ಆದಿಚುಂಚನಗಿರಿ­ಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದ ಸಾನಿಧ್ಯ­ವಹಿಸಿ ಮಾತನಾಡಿದರು.

ಪ್ರಜ್ಞೆ, ಧರ್ಮ ಹಾಗೂ ಸಾಮರಸ್ಯವನ್ನು ಮೂಡಿಸಬೇಕಾದದ್ದು ಧರ್ಮದ ಕಾಯಕ. ಸನಾತನ ಧರ್ಮದ ಬೀಡು ಭಾರತ. ನಿರಾಕಾರ ಎಂಬ ಶಕ್ತಿಯೇ ದೇವರು. ವಿದ್ಯುತ್ತಿನ ಶಕ್ತಿಯು ಹೇಗೆ ವಿವಿಧ ಪರಿಕರಗಳಿಗೆ ಹರಿದು ಹಲವು ರೀತಿಯ ಪ್ರಯೋಜನ ಪಡೆಯುತ್ತೇವೆಯೋ ಅದೇ ತೆರನಾಗಿ ವಿವಿಧ ಧರ್ಮಗಳಿಂದ ಹರಿದು ಬರುವ ಶಕ್ತಿಯು ಮಾನವ ಜನಾಂಗವನ್ನು ಶ್ರೇಷ್ಠತೆಗೆ ಕೊಂಡೊಯ್ಯುತ್ತದೆ ಎಂದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಎಂ. ವೀರಪ್ಪಮೊಯಿಲಿ ಎಲ್ಲಾ ಧರ್ಮಗಳ ಸಾರ ಒಂದೇ ಆಗಿದ್ದು ಜಾತಿ ಧರ್ಮಗಳ ನಡುವೆ ಸಂಘರ್ಷ ತೊಡೆದು ಹಾಕಿ, ಎಲ್ಲರೂ ಸಹಬಾಳ್ವೆ ನಡೆಸಬೇಕು ಎಂದರು.

ತುಮಕೂರು ಹಿರೇಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿ ಹಿಂದೂಧರ್ಮದ ಬಗ್ಗೆ ಉಪನ್ಯಾಸ ನೀಡಿದರೆ, ಇಸ್ಲಾಂ ಧರ್ಮದ ಕುರಿತು ಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕ ಮಹಮ್ಮದ್‌ಕುನ್ಹಿ ಹಾಗೂ ಎಚ್‌.ಡಿ.ಕೋಟೆ ಕ್ರೈಸ್ತ ಧರ್ಮಗುರು ಫಾದರ್‌ ರಾಯಪ್ಪ ಕ್ರೈಸ್ತಧರ್ಮದ ಕುರಿತು ಉಪನ್ಯಾಸ ನೀಡಿದರು. 

ಮನಸೂರೆಗೊಂಡ ತೆಪ್ಪೋತ್ಸವ: ರಾತ್ರಿ ನಡೆದ ತೆಪ್ಪೋತ್ಸವ ವಿಜೃಂಭಣೆಯಿಂದ ಕೂಡಿತ್ತು. ಸರ್ವಧರ್ಮ ಸಮ್ಮೇಳನದ ನಂತರ ಕಾಲಭೈರ ವೇಶ್ವರ ಪುಷ್ಕರಣಿಯಲ್ಲಿ ಕ್ಷೇತ್ರದ ದೇವತೆಗಳಾದ ಗಂಗಾಧರೇಶ್ವರಸ್ವಾಮಿ, ಭೈರವೇಶ್ವರ ಸ್ವಾಮಿಸ್ವಾಮಿ, ಚೌಡಾಂಬಿಕೆ ಮತ್ತು ನಿರ್ಮಲಾ ನಂದನಾಥಸ್ವಾಮೀಜಿ ಅವರನ್ನು ಸರ್ವಾಲಂಕೃತ ವಾದ ತೆಪ್ಪದಲ್ಲಿ ಕುಳ್ಳಿರಿಸಿ ತೆಪ್ಪೋತ್ಸವ ನಡೆಸಲಾ ಯಿತು. ಸಹಸ್ರಾರು ಭಕ್ತರು ಕಲ್ಯಾಣಿಸುತ್ತ ಸೇರಿ ತೆಪ್ಪೋತ್ಸವವನ್ನು ಭಕ್ತಿ ಭಾವದಿಂದ ವೀಕ್ಷಿಸಿದರು.

ಪುರುಷೋತ್ತಮಾ ನಂದನಾಥಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಪ್ರಸನ್ನನಾಥ ಸ್ವಾಮೀಜಿ, ಮಾಜಿ ಶಾಸಕರಾದ ಎಚ್.ಟಿ.ಕೃಷ್ಣಪ್ಪ, ಎಲ್.ಆರ್. ಶಿವರಾಮೇಗೌಡ, ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಟಿ. ಕೃಷ್ಣೇಗೌಡ, ಪ್ರಾಂಶುಪಾಲರಾದ ಸಿ.ನಂಜುಂಡಯ್ಯ, ಡಾ.ಎ.ಟಿ. ಶಿವರಾಮ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.