ADVERTISEMENT

‘ನೈತಿಕ ಬದುಕು ಏಡ್ಸ್‌ ನಿಯಂತ್ರಣಕ್ಕೆ ಮಾರ್ಗ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:32 IST
Last Updated 2 ಡಿಸೆಂಬರ್ 2013, 8:32 IST

ಮಂಡ್ಯ: ‘ನೈತಿಕ ನೆಲೆಗಟ್ಟಿನಲ್ಲಿ ಬದುಕು ನಡೆಸುವುದರಿಂದ ಎಚ್‌ಐವಿ–ಏಡ್ಸ್‌ನಂತಹ ಮಾರಕ ಕಾಯಿಲೆಗಳನ್ನು ನಿಯಂತ್ರಿಸಬಹುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಸಿ. ಜಯಣ್ಣ ಸಲಹೆ ನೀಡಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ  ಭಾನುವಾರ ಇಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಆಯೋಜಿಸಿದ್ದ ‘ವಿಶ್ವ ಏಡ್ಸ್‌ ವಿರುದ್ಧದ ಜಾಗೃತಿ ದಿನಾಚರಣೆ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಏನ್ನ ಕಾಲೆ ಕಂಬ, ದೇಹವೇ ದೇಗುಲ....’ ಎಂಬ ಬಸವಣ್ಣ ಅವರ ವಚನವನ್ನು ಉಲ್ಲೇಖಿಸಿದ ಅವರು, ಏನ್ನನ್ನೇ ಸಾಧನೆ ಮಾಡಬೇಕೆಂದರೂ, ಆರೋಗ್ಯವೇ ಬಹುಮುಖ್ಯ. ಹೀಗಾಗಿ, ಪ್ರತಿಯೊಬ್ಬರೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.

ನಗರೀಕರಣ ಬೆಳದಂತೆ ನೈತಿಕತೆ ಮರೆಯಾಗುತ್ತಿದೆ. ಎಚ್ಚರವಿಲ್ಲದ ತಪ್ಪುಗಳು ಜರುಗುತ್ತಿವೆ. ಪರಿಣಾಮ, ಏಡ್ಸ್‌ –ಎಚ್‌ಐವಿ ತರಹದ ಮಾರಕ ಸೋಂಕುಗಳು ವ್ಯಾಪಿಸುತ್ತಿವೆ. ನೈತಿಕ ಜಾಗೃತಿಯಿಂದ ಮಾತ್ರ ಇಂತಹ ರೋಗಗಳ ಮೇಲೆ ನಿಯಂತ್ರಣ ಸಾಧಿಸಬಹುದಾಗಿದೆ ಎಂದರು.

ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಶಶಿಕಲಾ ಮಾತನಾಡಿ, ‘ಸಮಾಜವನ್ನು ಘಾಸಿಗೊಳಿಸಿರುವ ಎಚ್‌ಐವಿ–ಏಡ್ಸ್‌ ಕಾಯಿಲೆಯು ವಿಶ್ವವ್ಯಾಪಿಯಾಗಿದ್ದು, ಈವೊಂದು ಸೋಂಕು 20 ರಿಂದ 35 ವರ್ಷದ ಹರೆಯದವರಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿರುವುದು ಆತಂಕ ಮೂಡಿಸಿದೆ’ ಎಂದು ಹೇಳಿದರು.

‘ವಿಶ್ವದಾದ್ಯಂತ ಅಂದಾಜು 45 ಮಿಲಿಯನ್‌ ಜನರು ಈ ಮಾರಕ ಕಾಯಿಲೆಗೆ ತುತ್ತಾಗಿದ್ದಾರೆ. ಭಾರತದಲ್ಲಿ 5 ಮಿಲಿಯನ್‌ನಷ್ಟು ಜನರು ಈ ಸೋಂಕಿಗೆ ಒಳಗಾಗಿದ್ದಾರೆ’ ಎಂದು ವಿಶ್ರಾಂತ ಆರೋಗ್ಯಾಧಿಕಾರಿ ಡಾ.ಲಿಂಗಯ್ಯ ತಿಳಿಸಿದರು.

‘ವಿಶ್ವ ಏಡ್ಸ್‌ ವಿರುದ್ಧದ ಜಾಗೃತಿ ದಿನಾಚರಣೆ’ ಈ ವರ್ಷದ ಘೋಷವಾಕ್ಯ ‘ಎಚ್‌ಐವಿ–ಏಡ್ಸ್‌’ ಅನ್ನು ಸೊನ್ನೆಗೆ ತನ್ನಿ ಎಂಬ ಘೋಷಣೆಯನ್ನು ಕೂಗಲಾಯಿತು.

ಇದಕ್ಕೂ ಮುನ್ನ, ಜಾಗೃತಿ ಜಾಥಾಗೆ ನಗರದ ಸರ್‌ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಚಾಲನೆ ನೀಡಲಾಯಿತು.

ಆಶೋದಯ ಸಮಿತಿ, ಬಿಎಲ್‌ಎಸ್‌ ಸ್ಕೂಲ್‌ ಆಫ್‌ ನರ್ಸಿಂಗ್‌, ಎಇಟಿ ಸ್ಕೂಲ್‌ ಆಫ್‌ ನರ್ಸಿಂಗ್‌, ಜ್ಯೋತಿರ್‌ ವಿಕಾಸ ಸಮಾಜ ಸೇವಾ ಸಂಸ್ಥೆ, ಭಾರತೀಯ ರೆಡ್‌ಕ್ರಾಸ್‌, ಆದರ್ಶ ಜೀವನ ಪಾಸಿಟಿವ್‌ ನೆಟ್‌ವರ್ಕ್‌, ಎಂಒಬಿ ಗ್ರಾಮೀಣ ಆರೋಗ್ಯ ಕೇಂದ್ರದ ಕಾರ್ಯಕರ್ತರು ಹಾಗೂ ವಿದ್ಯಾರ್ಥಿ­ಗಳು ರ್‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ನಗರಸಭೆ ಉಪಾಧ್ಯಕ್ಷೆ ಚಂದ್ರಕಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ, ಜಿಲ್ಲಾ ಆರೋಗ್ಯಾಧಿಕಾರಿ  ಡಾ. ಟಿ.ಎನ್‌. ಮರೀಗೌಡ, ತಹಶೀಲ್ದಾರ್‌ ಡಾ.ಬಿ.ಕೆ. ಮಮತಾ, ರೆಡ್‌ಕ್ರಾಸ್‌ ಸಂಸ್ಥೆಯ ಮೀರಾ ಶಿವಲಿಂಗಯ್ಯ, ನೆಹರು ಯುವ ಕೇಂದ್ರದ ಸಿದ್ದರಾಮಪ್ಪ, ವಾರ್ತಾಧಿಕಾರಿ ರಾಜು, ಸುಜಾತಾ ಕೃಷ್ಣ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.