ADVERTISEMENT

ನಿತ್ಯ ಬೇಕಿದೆ 12 ಕಿಲೋ ಲೀಟರ್‌ ಆಮ್ಲಜನಕ

ಜೀವರಕ್ಷಕ ದ್ರವಕ್ಕೆ ವಿಪರೀತ ಬೇಡಿಕೆ, ಕೊರತೆ ಉಂಟಾಗದಂತೆ ನಿಗಾ ವಹಿಸಿದ ಜಿಲ್ಲಾಡಳಿತ

ಎಂ.ಎನ್.ಯೋಗೇಶ್‌
Published 25 ಏಪ್ರಿಲ್ 2021, 5:10 IST
Last Updated 25 ಏಪ್ರಿಲ್ 2021, 5:10 IST
ದ್ರವರೂಪಕ ಆಮ್ಲಜನಕ ಸಂಗ್ರಹ ಘಟಕ (ಸಾಂದರ್ಭಿಕ ಚಿತ್ರ)
ದ್ರವರೂಪಕ ಆಮ್ಲಜನಕ ಸಂಗ್ರಹ ಘಟಕ (ಸಾಂದರ್ಭಿಕ ಚಿತ್ರ)   

ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್‌–19 ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಆಮ್ಲಜನಕ ಬೇಡಿಕೆ ತೀವ್ರಗೊಳ್ಳುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ 10ರಿಂದ 12 ಕಿಲೋ ಲೀಟರ್‌ (12 ಸಾವಿರ ಲೀಟರ್‌) ಆಮ್ಲಜನಕ ಬಳಕೆಯಾಗುತ್ತಿದೆ.

ಸದ್ಯಕ್ಕೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಆಮ್ಲಜನಕ ಕೊರತೆ ಕಂಡು ಬಂದಿಲ್ಲ. ಶನಿವಾರ ಸಂಜೆ ಮಿಮ್ಸ್‌ ಆಸ್ಪತ್ರೆ ಆಮ್ಲಜನಕ ಘಟಕಕ್ಕೆ 11 ಕಿಲೋ ಲೀಟರ್‌ ಆಮ್ಲಜನಕ ಪೂರೈಕೆಯಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲೂ ಆಮ್ಲಜನಕ ಸಿಲಿಂಡರ್‌ಗಳ
ಸಂಗ್ರಹವಿದೆ. ರೋಗಿಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕಾರಣ ಮುಂದೆ ಆಮ್ಲಜನಕದ ಕೊರತೆಯಾಗದಂತೆ ಜಿಲ್ಲಾಡಳಿತ ನಿಗಾ ವಹಿಸಿದೆ.

ಮಿಮ್ಸ್‌ ಆವರಣದಲ್ಲಿ 13 ಕಿಲೋ ಲೀಟರ್‌ ದ್ರವರೂಪದ ಆಮ್ಲಜನಕ ಘಟಕವಿದೆ. ಆಮ್ಲಜನಕ ಪೂರೈಕೆಗೆ ಏಜೆನ್ಸಿಗೆ ಟೆಂಡರ್‌ ನೀಡಲಾ
ಗಿದ್ದು, ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತದೆ. ಈಗ ಬೇಡಿಕೆ ಹೆಚ್ಚಾಗಿರುವ ಕಾರಣ ನಿತ್ಯವೂ ಸರಬರಾಜು ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅದಕ್ಕೆ ತಗುಲುವ ವೆಚ್ಚವನ್ನು ಮಿಮ್ಸ್‌ ಆಸ್ಪತ್ರೆ ಆಡಳಿತ ಮಂಡಳಿಯೇ ಭರಿಸುತ್ತದೆ.

ADVERTISEMENT

‘ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಅವಶ್ಯ ವಿರುವಷ್ಟು ಆಮ್ಲಜನಕ ಪೂರೈಕೆ ಯಾಗುತ್ತಿದೆ. ಜಿಲ್ಲಾಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ರೋಗಿಗಳು ಹಾಗೂ ಕೋವಿಡ್‌ಯೇತರ ರೋಗಿಗಳಿಗೆ ಯಾವುದೇ ಕೊರತೆ ಉಂಟಾಗಿಲ್ಲ. ಆಮ್ಲಜನಕ ಸಂಗ್ರಹದ ಬಗ್ಗೆ ಎಲ್ಲಾ ವಿವರಗಳನ್ನು ನಿತ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಹೇಳಿದರು.

ಮಿಮ್ಸ್‌ ಆಸ್ಪತ್ತೆ ಒಟ್ಟು 400 ಹಾಸಿಗೆ ಸಾಮರ್ಥ್ಯ ಹೊಂದಿದ್ದು ಕೋವಿಡ್‌ ವಾರ್ಡ್‌ಗಾಗಿ 285 ಹಾಸಿಗೆ ನೀಡಲಾಗಿದೆ. ಈ ಎಲ್ಲಾ ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ. ಇನ್ನೂ 115 ಹೆಚ್ಚುವರಿ ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ನೀಡಲು ಮಿಮ್ಸ್‌ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗ ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ 4–5 ಕಿಲೋ ಲೀಟರ್‌ಆಮ್ಲಜನಕ ಪೂರೈಕೆಯಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮುಂದಿನ ಪರಿಸ್ಥಿತಿ ನಿಭಾಯಿಸಲು ಇನ್ನೊಂದು ಆಮ್ಲಜನಕ ಘಟಕ ನಿರ್ಮಾಣಕ್ಕಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ತಾಲ್ಲೂಕು ಆಸ್ಪತ್ರೆ ಸ್ಥಿತಿ: ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 50 ಆಮ್ಲಜನಕ ಪೂರೈಕೆ ಸೌಲಭ್ಯವುಳ್ಳ ಹಾಸಿಗೆಗಳಿವೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ನಿತ್ಯ 2–3 ಕಿಲೋ ಲೀಟರ್‌ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ತಾಲ್ಲೂಕು ಆಸ್ಪತ್ರೆಗಳು ಖಾಸಗಿ ಏಜೆನ್ಸಿಗಳ ಮೂಲಕ ಆಮ್ಲಜನಕ ಸಿಲಿಂಡರ್‌ ಖರೀದಿ ಮಾಡುತ್ತಾರೆ. ಪ್ರತಿ ಆಸ್ಪತ್ರೆಯಲ್ಲಿ ತಲಾ 24 ಜಂಬೊ ಸಿಲಿಂಡರ್‌ಗಳ ಸಂಗ್ರಹವಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಪಡೆಯುತ್ತಿದ್ದು ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ 2–3 ಕಿಲೋ ಲೀಟರ್‌ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಸರ್ಕಾರಿ, ಖಾಸಗಿ ಆಂಬುಲೆನ್ಸ್‌ಗಳಿಗೂ ಆಮ್ಲಜನಕ ಸೌಲಭ್ಯಗಳಿದ್ದು, 1 ಕಿಲೋ ಲೀಟರ್‌ ಆಮ್ಲಜನಕ ಸರಬರಾಜು ಮಾಡಲಾಗುತ್ತಿದೆ.

ಆದಿಚುಂಚನಗಿರಿ ಆಸ್ಪತ್ರೆಯಲ್ಲೂ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 2 ಕಿಲೋ ಲೀಟರ್‌ ಆಮ್ಲಜನಕದ ಅವಶ್ಯಕತೆ ಇದೆ. ಒಟ್ಟಾರೆ ಈಗಿನ ಪರಿಸ್ಥಿತಿಯಲ್ಲಿ 10–12 ಕಿಲೋ ಲೀಟರ್‌ ಆಮ್ಲಜನಕದ ಅವಶ್ಯಕತೆ ಇದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

‘ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು ಮಾತ್ರವಲ್ಲದೇ ಜಿಲ್ಲೆಯ 9 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ
30 ಹಾಸಿಗೆ ಸೌಲಭ್ಯವಿದ್ದು, ಆಮ್ಲಜನಕ ಪೂರೈಕೆ ಸೌಲಭ್ಯವಿದೆ. ರೋಗಿಗಳ ಸಂಖ್ಯೆ ಇನ್ನೂ ಹೆಚ್ಚಾದರೆ ಇವುಗಳನ್ನೂ ಬಳಕೆ ಮಾಡಿ
ಕೊಳ್ಳಲಾಗುವುದು. ವೆಂಟಿಲೇಟರ್‌ಗಳ ಸಂಖ್ಯೆ ಹೆಚ್ಚಾದಂತೆಲ್ಲ ಆಮ್ಲಜನಕದ ಬೇಡಿಕೆಯೂ ಹೆಚ್ಚಾಗಲಿದೆ. ಈಗಿನ ಪರಿಸ್ಥಿತಿಯಲ್ಲಿ ಆಮ್ಲಜನಕಕ್ಕೆ ವಿಪರೀತ ಬೇಡಿಕೆ ಸೃಷ್ಟಿಯಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಚುಂಚನಗಿರಿ ಆಸ್ಪತ್ರೆಯಲ್ಲಿ ಕೊರತೆ

ಆದಿಚುಂಚನಗಿರಿ ಆಸ್ಪತ್ರೆ (ಏಮ್ಸ್‌)ಯಲ್ಲಿ ಕಳೆದೆರಡು ದಿನಗಳಿಂದ ಆಮ್ಲಜನಕದ ಕೊರತೆ ಉಂಟಾಗಿ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಸ್ಪತ್ರೆ ಆವರಣದಲ್ಲಿ 2 ಕಿಲೋ ಲೀಟರ್‌ ಘಟಕವಿದೆ. ಆದರೆ ಅನ್ನು 14 ಕಿಲೋ ಲೀಟರ್‌ ಸಾಮರ್ಥ್ಯಕ್ಕೆ ವಿಸ್ತರಿಸುವಂತೆ ಆಸ್ಪತ್ರೆ ಬೇಡಿಕೆ ಸಲ್ಲಿಸಿದೆ. ಆದರೆ ಅಷ್ಟು ಪ್ರಮಾಣದ ಆಮ್ಲಜನಕ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಕೊರತೆ ಎದುರಾಗಿದೆ.

‘ಆಮ್ಲಜನಕ ಕೊರತೆಯಾದ ಕಾರಣ ಏಮ್ಸ್‌ನಲ್ಲಿ ವೆಂಟಿಲೇಟರ್‌ನಲ್ಲಿದ್ದ ರೋಗಿಗಳನ್ನು ಸ್ಥಳಾಂತರ ಮಾಡಲಾಗಿದೆ’ ಎಂದು ವೈದ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.