ADVERTISEMENT

35 ಕೋಟಿ ವೆಚ್ಚದಲ್ಲಿ 192 ಕೆರೆಗಳ ಪುನಃಶ್ಚೇತನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 7:10 IST
Last Updated 22 ಜೂನ್ 2011, 7:10 IST

ಮಂಡ್ಯ: ಜಿಲ್ಲೆಯಲ್ಲಿ ಅಂತರ್ಜಲ ಸಂರಕ್ಷಣೆಗೆ  ಒತ್ತು ನೀಡುವುದು ಸೇರಿ ದಂತೆ ಒಟ್ಟು 192 ಕೆರೆಗಳನ್ನು ಪುನಃಶ್ಚೇತನಗೊಳಿಸಲು ಗುರುತಿಸ ಲಾಗಿದ್ದು, ಒಟ್ಟಾರೆ 35 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾರ್ಯವನ್ನು ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಆರ್.ಅಶೋಕ್ ಮಂಗಳವಾರ ತಿಳಿಸಿದರು.

ಇಲ್ಲಿನ ಅರಕೇಶ್ವರ ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಅವರು 2010-11 ಮತ್ತು 2011-12ನೇ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲೆಗೆ ಸೇರಿದ ವಿದ್ಯಾರ್ಥಿಗಳಿಗೆ ಬೈಸಿಕಲ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಕೆರೆಗಳನ್ನು ಉಳಿಸುವ ಕೆಲಸ ಆದ್ಯತೆಯ ಮೇರೆ ಆಗಬೇಕಾಗಿದೆ. ಮಂಡ್ಯದಲ್ಲಿ ಸುಮಾರು 1,200 ಎಕರೆಯಷ್ಟು ಒತ್ತುವರಿಯಾಗಿದ್ದ ಕೆರೆ ಭೂಮಿಯನ್ನು ತೆರವುಗೊಳಿಸಿದ್ದು, ಬೆಂಗಳೂರು ಹೊರತುಪಡಿಸಿದರೆ ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಕೆಲಸವಾಗಿದೆ ಎಂದು ಶ್ಲಾಘಿಸಿದರು.

ಸುವರ್ಣ ಭೂಮಿ-ವಾರದಲ್ಲಿ ಚೆಕ್: ಕೃಷಿ ಚಟುವಟಿಕೆಗಳಿಗಾಗಿ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಆರ್ಥಿಕ ನೆರವು ನೀಡುವ ಸುವರ್ಣ ಭೂಮಿ ಯೋಜನೆಯಡಿ  ಆಯ್ಕೆಯಾಗಿರುವ ಫಲಾನುಭವಿಗಳಿಗೆ ವಾರದಲ್ಲಿ ಚೆಕ್ ವಿತರಿಸಲಾಗುವುದು ಎಂದರು.

ರಸ್ತೆಗಳ ಅಭಿವೃದ್ಧಿ: ಜಿಲ್ಲೆಯಲ್ಲಿ ರಸ್ತೆಗಳ ದುಃಸ್ಥಿತಿ ಉಲ್ಲೇಖಿಸಿದ  ಅವರು, ಜನಪ್ರತಿನಿಧಿಗಳು ಈ ಬಗೆಗೆ ಗಮನ ಸೆಳೆದಿದ್ದಾರೆ. ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿಗೂ ಮುಂದಿನ ದಿನಗಳಲ್ಲಿ  ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರ ಸಾರಿಗೆ: ನಗರದಲ್ಲಿ ಸಾರಿಗೆ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಿದ್ದು, ಈ ಕುರಿತು ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಬೈಸಿಕಲ್ ನೀಡುವ ಯೋಜನೆಗೆ ಚಾಲನೆ
ಪ್ರೌಢಶಾಲೆ ಹಂತಕ್ಕೆ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸುವ ಉದ್ದೇಶ ದಿಂದ 8ನೇ ತರಗತಿಗೆ ಸೇರ್ಪಡೆ ಯಾಗುವ ವಿದ್ಯಾರ್ಥಿಗಳಿಗೆ ಬೈಸಿಕಲ್ ಅನ್ನು ನೀಡುವ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಮಂಗಳವಾರ ಚಾಲನೆ ನೀಡಿದರು.

2010-11ನೇ ಮತ್ತು 2011- 12ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿ ದಂತೆ ಜಿಲ್ಲೆಯಲ್ಲಿ ಒಟ್ಟು 39,048 ವಿದ್ಯಾರ್ಥಿಗಳಿಗೆ ಬೈಸಿಕಲ್ ಅನ್ನು ನೀಡಲಾಗುತ್ತದೆ ಎಂದು ಪ್ರಕಟಿಸಿ ದರು. ಇದರಲ್ಲಿ 18,789 ಬಾಲಕರು ಮತ್ತು 20,259 ಬಾಲಕಿಯರು ಸೇರಿದ್ದಾರೆ.

ನಗರದ ಅರಕೇಶ್ವರ ನಗರದ ಪ್ರೌಢಶಾಲೆಯಲ್ಲಿ ಸಾಂಕೇತಿಕವಾಗಿ ಕೆಲ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಿದ ಅವರು,  2010-11ನೇ ಸಾಲಿನಲ್ಲಿ ಬೈಸಿಕಲ್‌ಗಳನ್ನು ವಿತರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ 8ನೇ ತರಗತಿಗೆ ಸೇರುವ ಮತ್ತು 9ನೇ ತರಗತಿಗೆ ಬಡ್ತಿ ಪಡೆದಿರುವ ವಿದ್ಯಾರ್ಥಿಗಳಿಗೆ ಬೈಸಿಕಲ್ ಅನ್ನು ಈಗ ಒಟ್ಟಿಗೇ ವಿತರಿಸಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್, ಜಿಪಂ ಸಿಇಒ ಜಯರಾಂ, ಡಿಡಿಪಿಐ ಗೋಪಾಲ್, ಮೈಷುಗರ್ ಅಧ್ಯಕ್ಷ ನಾಗರಾಜಪ್ಪ, ಜಿಲ್ಲಾ ಜಿಪಂ ಅಧ್ಯಕ್ಷ ಶಿವಣ್ಣ, ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್, ಶಾಸಕ ಅಶ್ವತ್ಥನಾರಾಯಣ, ಎಂ. ಶ್ರೀನಿವಾಸ್, ಮುಡಾ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಪಿ.ಮಹೇಶ್ ಮತ್ತಿತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.