ADVERTISEMENT

₹ 500 ಕೋಟಿ ಪ್ಯಾಕೇಜ್‌ ನೀಡಲು ಮನವಿ

ಮಂಡ್ಯ ನಗರ ಅಭಿವೃದ್ಧಿಗೆ ವಿವಿಧ ಯೋಜನೆಗಳು: ಶಾಸಕ ಎಂ.ಶ್ರೀನಿವಾಸ್

ಪಿಟಿಐ
Published 17 ಜೂನ್ 2018, 9:45 IST
Last Updated 17 ಜೂನ್ 2018, 9:45 IST

ಮಂಡ್ಯ: ನಗರದ ಅಭಿವೃದ್ಧಿಗಾಗಿ ₹ 500 ಕೋಟಿ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಲಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ಅಭಿವೃದ್ಧಿಗಾಗಿ ಹಿಂದಿನ ಅವಧಿಯಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಎಲ್ಲ ಯೋಜನೆಗಳಿಗೆ ಮರುಜೀವ ನೀಡುತ್ತೇನೆ’ ಎಂದರು.

ತಾಲ್ಲೂಕು ಪಂಚಾಯಿತಿ ಕಟ್ಟಡ ಶಿಥಿಲಗೊಂಡಿದ್ದು, ಅದನ್ನು ಒಡೆದು ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. ತಾಲ್ಲೂಕು ಕಚೇರಿಯ ಕೇವಲ ಎರಡು ಅಂತಸ್ತು ನಿರ್ಮಾಣವಾಗಿದೆ. ಉಳಿದ ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ. ನಗರದ ಹಳೆಯ ಎಸ್‌ಪಿ ಕಚೇರಿಯನ್ನು ಕೆಡವಿ ಜಿಲ್ಲೆಯ ಅಮೃತ ಮಹೋತ್ಸವ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ. ನಗರದಲ್ಲಿ ಭವ್ಯ ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದು ನನ್ನ ಕನಸಾಗಿತ್ತು. ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅದರ ಸಂಪೂರ್ಣ ಕಾರ್ಯ ಮುಕ್ತಾಯವಾಗದಿದ್ದರೂ ಉದ್ಘಾಟನೆ ಮಾಡಿದ್ದಾರೆ. ಭವನದಲ್ಲಿ ಇನ್ನೂ ಬಹುತೇಕ ಕೆಲಸಗಳು ಬಾಕಿ ಇವೆ. ಬಾಕಿ ಕೆಲಸಕ್ಕೆ ಚುರುಕು ನೀಡಿ ಶೀಘ್ರದಲ್ಲಿ ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

‘ರಾಮನಗರ ಮಾದರಿಯಲ್ಲಿ ನಗರದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡುವ ಕನಸಿದೆ. ಬೆಂಗಳೂರು–ಮೈಸೂರು ಹೆದ್ದಾರಿ ಪಕ್ಕದಲ್ಲಿ ಭವ್ಯವಾದ ಮಿನಿ ವಿಧಾನಸೌಧ ನಿರ್ಮಾಣ ಮಾಡುವ ಯೋಜನೆಯಿದೆ. ನಗರದಾದ್ಯಂತ ವ್ಯವಸ್ಥಿತ ರಸ್ತೆ ಹಾಗೂ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುವುದು. ನಗರದ ರಾಮಣ್ಣ ವೃತ್ತದಿಂದ ಗೌರಿಶಂಕರ ಕಲ್ಯಾಣ ಮಂಟಪದವರೆಗೆ ನೂರಡಿ ರಸ್ತೆಯನ್ನು ಸಂಪೂರ್ಣವಾಗಿ ಕಾಂಕ್ರೀಟ್ ರಸ್ತೆಯನ್ನಾಗಿ ಮೂರು ಹಂತದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಜಿಲ್ಲೆಗೆ ಒಂದು ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯಕ. ಈಗಿರುವ ಹೆರಿಗೆ ಆಸ್ಪತ್ರೆ ಜಾಗದಲ್ಲಿ ಈ ಕಟ್ಟಡ ನಿರ್ಮಾಣ ಮಾಡುವ ಯೋಜನೆಯಿದೆ. ಈಗಿರುವ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯನ್ನು ಬೇರೆಡೆ ಸ್ಥಳಾಂತರ ಮಾಡಿ ಅಲ್ಲಿ ಬೃಹತ್ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು’ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುವುದು. ಶಿಥಿಲಾವಸ್ಥೆಯಲ್ಲಿ ಇರುವ ಶಾಲೆ– ಕಾಲೇಜುಗಳನ್ನು ತೆರವು ಮಾಡಿ ಹೊಸ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು. ನಗರದ ಅರಕೇಶ್ವರ ಬಾಲಕಿಯರ ಪಿಯು ಕಾಲೇಜು ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಕಾರ್ಯವನ್ನು ಶೀಘ್ರವಾಗಿ ಆರಂಭಿಸಲಾಗುವುದು. ಮಂಡ್ಯವನ್ನು ಮಾದರಿ ನಗರ ನಿರ್ಮಾಣ ಮಾಡುವ ಯೋಜನೆ ಹೊಂದಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ಪಂದಿಸುವ ಭರವಸೆ ಇದೆ. ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ಒಟ್ಟಾರೆ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಎಲ್ಲ ಗ್ರಾಮೀಣ ರಸ್ತೆಗಳನ್ನು ಸುವ್ಯಸ್ಥಿತವಾಗಿ ಇರುವಂತೆ ಜವಾಬ್ದಾರಿ ವಹಿಸಲಾಗುವುದು. ಕುಡಿಯುವ ನೀರು ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯಕ್ಕೆ ವೇಗ ಹೆಚ್ಚಿಸಲಾಗುವುದು. ನಮ್ಮ ಜಿಲ್ಲೆಯವರೇ ಸಣ್ಣ ನೀರಾವರಿ ಸಚಿವರು ಇರುವುದರಿಂದ ಕ್ಷೇತ್ರದ ಎಲ್ಲ ಕೆರೆಗಳ ಹೂಳೆತ್ತುವ ಹಾಗೂ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತದೆ. ಯಾರಾದರೂ ಕೆರೆ ಒತ್ತುವರಿ ಮಾಡಿದ್ದರೆ ತೆರವುಗೊಳಿಸಿ ರೈತರಿಗೆ ಅನುಕೂಲವಾಗುವಂತೆ ಕೆರೆಗೆ ಮರುಜೀವ ನೀಡಲಾಗುವುದು. ಬಸರಾಳು ಗ್ರಾಮದಲ್ಲಿ ವ್ಯವಸ್ಥಿತ ಬಸ್‌ ನಿಲ್ದಾಣ ಮಾಡುವ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಕ್ಷೇತ್ರಕ್ಕೆ ಒಂದು ಮಾದರಿ ಶಾಲೆ ನಿರ್ಮಾಣ ಮಾಡುವ ಯೋಜನೆಯಿದ್ದು, ಅದನ್ನು ಬಸರಾಳು ಹೋಬಳಿಯಲ್ಲಿ ಮಾದರಿ ಶಾಲೆ ನಿರ್ಮಿಸಲು ಶಿಫಾರಸು ಮಾಡಲಾಗಿದೆ ಎಂದರು.

ಮುಖಂಡರಾದ ಬಿ.ಲೋಕೇಶ್, ಕೆ.ಎಸ್.ವಿಜಯಾನಂದ, ಎಸ್‌.ಪಿ.ಗೌರೀಶ್, ಮುಕುಂದ್, ನವೀನ್‌ ಇದ್ದರು.

ಮೈಷುಗರ್ ಕಾರ್ಖಾನೆ ಆಗಸ್ಟ್‌ನಲ್ಲಿ ಕಾರ್ಯಾರಂಭ

ಮೈಷುಗರ್ ಕಾರ್ಖಾನೆಗೆ ಭೇಟಿ ಮಾಡಿ ಎಲ್ಲ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಕಾರ್ಖಾನೆಯ ಬಾಯ್ಲರ್ ಸರಿಪಡಿಸಿ ಕಾರ್ಖಾನೆ ಪುನರಾರಂಭಕ್ಕೆ ಅಗತ್ಯವಾದ ಕೆಲಸಗಳನ್ನು ಮಾಡಿಸಲು ಶಿಫಾರಸು ಮಾಡಲಾಗಿದೆ. ಮೈತ್ರಿ ಸರ್ಕಾರದಿಂದ ಕಾರ್ಖಾನೆ ಪುನರಾರಂಭಕ್ಕೆ ₹ 20 ಕೋಟಿ ಅನುದಾನ ಬಿಡುಗಡೆಗೆ ಸಿಎಂ ಎಚ್‌ಡಿಕೆ ಒಪ್ಪಿಗೆ ಸೂಚಿಸಿದ್ದು, 15 ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ. ಈ ಹಣದಲ್ಲಿ ರೈತರ ಕಬ್ಬಿನ ಬಾಕಿ ಹಣ ಹಾಗೂ ಕಾರ್ಮಿಕರ ವೇತನ ನೀಡಿ ಉಳಿದ ಹಣದಲ್ಲಿ ಕಾರ್ಖಾನೆಗೆ ಸಾಮಗ್ರಿ ಖರೀದಿ ಮಾಡಲಾಗುತ್ತದೆ. ಕಾರ್ಖಾನೆ ದುರಸ್ತಿ ಕಾರ್ಯ ನಡೆಯಲಿದೆ. ಆಗಸ್ಟ್ ಮೊದಲ ವಾರದಲ್ಲಿ ಪುನರಾರಂಭವಾಗಲಿದೆ. ಕಾರ್ಖಾನೆಯಲ್ಲಿ ₹ 15 ಕೋಟಿ ಮೌಲ್ಯದ ಸಕ್ಕರೆ ದಾಸ್ತಾನು ಇದ್ದು, ಮುಂದಿನ ದಿನಗಳಲ್ಲಿ ಸೂಕ್ತವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕಾರ್ಖಾನೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.