ADVERTISEMENT

‘ದೊಡ್ಡರಸಿನಕೆರೆ’ ತುಂಬೆಲ್ಲ ದೇವಾಲಯ..!

ಅಂಬರಹಳ್ಳಿ ಸ್ವಾಮಿ
Published 28 ಜನವರಿ 2018, 6:50 IST
Last Updated 28 ಜನವರಿ 2018, 6:50 IST
ಭಾರತೀನಗರ ಸಮೀಪದ ದೊಡ್ಡರಸಿನಕೆರೆ ಗ್ರಾಮದ ಗ್ರಾಮದೇವತೆ ಕಾಳಿಕಾಂಬಾ ದೇವಾಲಯ
ಭಾರತೀನಗರ ಸಮೀಪದ ದೊಡ್ಡರಸಿನಕೆರೆ ಗ್ರಾಮದ ಗ್ರಾಮದೇವತೆ ಕಾಳಿಕಾಂಬಾ ದೇವಾಲಯ   

ಭಾರತೀನಗರ: ಎಲ್ಲುಕಾಣೆಲ್ಲು ಕಾಣೆ, ಕಾಳಮ್ಮನಂತವಳ ಎಲ್ಲುಕಾಣೆಲ್ಲು ಕಾಣೆ, ಮಂಗಳವಾರ ದಿನ ಅಂಗಳವ ಸಾರಿಸಿ, ಹೂವು– ಹಣ್ಣು ಕಾಯಿ– ಕರ್ಪೂರ ಕಾಳಮ್ಮಗೆ, ಎಲ್ಲುಕಾಣೆಲ್ಲುಕಾಣೆ ಕಾಳಮ್ಮನಂತವಳ ಎಲ್ಲುಕಾಣೆಲ್ಲುಕಾಣೆ...

ಸಮೀಪದ ದೊಡ್ಡರಸಿನಕೆರೆ ಗ್ರಾಮಸ್ಥರು ಗ್ರಾಮ ದೇವತೆ ಕಾಳಿಕಾಂಬೆಯನ್ನು ವರ್ಣಿಸುವ ಪರಿ ಇದು. ಹೌದು, ದೊಡ್ಡರಸಿನಕೆರೆ ಗ್ರಾಮವು ಹೆಸರಿಗೆ ತಕ್ಕಂತೆ ಬಹು ದೊಡ್ಡ ಗ್ರಾಮ. ಗ್ರಾಮವು ತನ್ನದೇ ಇತಿಹಾಸ ಹೊಂದಿದೆ. ಎಲ್ಲ ಕೋಮುಗಳ ಜನರು ಸಾಮರಸ್ಯದಿಂದ ಬಾಳುವೆ ಮಾಡುವುದೇ ಗ್ರಾಮದ ಹೆಗ್ಗಳಿಕೆ. ಹಲವು ರಾಜಕೀಯ ನಾಯಕರ, ಉನ್ನತ ಅಧಿಕಾರಿಗಳ, ಕಲಾವಿದರ, ಕ್ರೀಡಾಪಟುಗಳ, ಶಿಕ್ಷಕರ, ಪ್ರತಿಭಾವಂತ ಯುವಕರ ತವರೂರು. ಸೇವೆಗೂ ಸೈ, ಹೋರಾಟಕ್ಕೂ ಸೈ ಎನ್ನುವ ಗ್ರಾಮದ ಯುವಕರು ಮತ್ತು ಮಹಿಳೆಯರ ಪಡೆಯೇ ಗ್ರಾಮದಲ್ಲಿದೆ.

ಗ್ರಾಮಸ್ಥರಲ್ಲಿನ ಸಾಮರಸ್ಯ ಎಲ್ಲರಿಗೂ ಮಾದರಿ. ಜನರ ಸಾಮರಸ್ಯದ ಹಿಂದೆ ಗ್ರಾಮದ ದೇವಾಲಯಗಳಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಗ್ರಾಮದಲ್ಲಿ ಆಗಾಗ್ಗೆ ನಡೆಯುವ ಹಬ್ಬ ಹರಿದಿನಗಳು ಗ್ರಾಮಸ್ಥರನ್ನು ಪರಸ್ಪರ ಹತ್ತಿರಕ್ಕೆ ತಂದು ಏಕತೆ ಮೂಡಿಸಿವೆ. ಏಳು ಊರುಗಳ ಜನರು ಆರಾಧಿಸುವ ದೇವತೆ ‘ಏಳೂರಮ್ಮ’ ದೊಡ್ಡರಸಿನಕೆರೆಯಲ್ಲಿ ನೆಲೆಸಿರುವುದು ವಿಶೇಷ.

ADVERTISEMENT

ಗ್ರಾಮ ದೇವತೆ ಕಾಳಿಕಾಂಬೆ ಗ್ರಾಮಸ್ಥರ ಆರಾಧ್ಯ ದೇವತೆ. ಗ್ರಾಮದ ಅಂಗಳದಲ್ಲೇ ಕಾಳಿಕಾಂಬೆ, ಈಶ್ವರ, ವೀರಭದ್ರ, ಶನೀಶ್ವರ, ಶ್ರೀರಾಮ, ಆಂಜನೇಯ, ನವಗ್ರಹ ದೇವಾಲಯಗಳನ್ನು ನವೀಕರಿಸಿ ನಿರ್ಮಾಣ ಮಾಡಲಾಗಿದೆ. ಇವು ಗ್ರಾಮದ ಮುಕುಟ ಮಣಿಗಳಂತೆ ಜನರನ್ನು ಆಕರ್ಷಿಸುತ್ತಿವೆ.

ಮಕ್ಕಳ ದೇವತೆ ಹಿರಿಯಮ್ಮ, ಲಕ್ಷ್ಮಿ ದೇವಿ, ಮಾರಮ್ಮ, ಚೌಡಮ್ಮ ದೇವಾಲಯಗಳು, ಗ್ರಾಮದ ಗಂಗಾಮತಸ್ಥ ಸಮುದಾಯದವರ ಆರಾಧ್ಯ ದೇವತೆ ಚಿಕ್ಕಮ್ಮ, ಮಸಣಮ್ಮ ದೇವಾಲಯಗಳು, ದಲಿತರ ಆರಾಧ್ಯ ದೇವತೆ ಮಂಚಮ್ಮ, ಪಟ್ಟಲದಮ್ಮ, ಗುಡಿಸಲಮ್ಮ, ಮಾರಮ್ಮ ದೇವಾಲಯಗಳು ಇತಿಹಾಸದ ಕಥೆ ಹೇಳುವುದರ ಜೊತೆಗೆ ಜನರಲ್ಲಿ ಭಕ್ತಿ ಭಾವನೆ ಮೂಡಿಸಿವೆ. ಗ್ರಾಮದ ಕೆರೆಯಲ್ಲಿರುವ ಕಪ್ಪೆ ಚನ್ನಿಗರಾಯ ದೇವಾಲಯ, ಈಡಿಗ ಸಮುದಾಯದ ಪೋತಲಿಂಗೇಶ್ವರ ದೇವಾಲಯ, ದಲಿತರ ಚನ್ನಿಗರಾಯ ದೇವಾಲಯ, ಚಂದ್ರಗುಪ್ತಮ್ಮ ದೇವಾಲಯಗಳು ಐತಿಹಾಸಿಕ ಕಥೆಯನ್ನು ಹೇಳುತ್ತವೆ.

ಒಂದು ರಾತ್ರಿಯಲ್ಲಿ ನಿರ್ಮಾಣಗೊಂಡು, ಇದುವರೆಗೂ ಪೂಜೆಯನ್ನೇ ಕಾಣದ, ಚೋಳರ ಕಾಲದ ಮಾಧವರಾಯ ದೇವಾಲಯ ಪಾಳುಬಿದ್ದಿದೆ. ಏಳು ಗ್ರಾಮಗಳ ಜನರು, ಏಳು ವರ್ಷಕ್ಕೊಮ್ಮೆ ಆಚರಿಸಲಾಗುವ ಹಾಗೂ ಗ್ರಾಮದ ಹೆಣ್ಣು ಮಕ್ಕಳಿಗೆ ಪ್ರಿಯವಾದ ದೇವತೆ ಎಂದೇ ಕರೆಯಲಾಗುವ ಕ್ಯಾತಮ್ಮ ದೇವಾಲಯ ಗ್ರಾಮದ ಮಹಿಳೆಯರ ಭಕ್ತಿಗೆ ಪಾತ್ರವಾಗಿದೆ.

ಗ್ರಾಮದ ಬಹುತೇಕರ ಮನೆದೇವರಾಗಿರುವ ಸಣ್ಣಕ್ಕಿರಾಯ ಸ್ವಾಮಿ ದೇವಾಲಯವನ್ನು ಗ್ರಾಮದ ಹೊರವಲಯದಲ್ಲಿ ಆಕರ್ಷಕವಾಗಿ ನಿರ್ಮಿಸಲಾಗಿದೆ. ಜೀವಂತ ಮನುಷ್ಯನನ್ನು ಸಿಡಿಗಂಬಕ್ಕೆ ಕಟ್ಟಿ ಮೂರು ದಿನಗಳ ಕಾಲ ಆಚರಿಸಲಾಗುವ ಪ್ರಸಿದ್ಧ ‘ಸಿಡಿಹಬ್ಬ’ ಗ್ರಾಮದಲ್ಲಿ ಪ್ರತಿವರ್ಷ ನಡೆಯುತ್ತದೆ.

ಕಾಲಭೈರವೇಶ್ವರನ ಬಸವ ಹಾಗೂ ಸಣ್ಣಕ್ಕಿರಾಯ ಸ್ವಾಮಿ ಬಸವಗಳಿಗೂ ದೇವಾಲಯ ನಿರ್ಮಿಸಿರುವುದು ಗ್ರಾಮದ ವಿಶೇಷ. ‘ದೇವರಲ್ಲಿನ ಭಕ್ತಿ ಭಾವನೆಗಳು ಮನುಷ್ಯನನ್ನು ಮೌಲ್ಯವುಳ್ಳವನನ್ನಾಗಿ ಮಾಡುತ್ತದೆ. ದೇವಾಲಯಗಳು ಜನರಲ್ಲಿನ ಅಜ್ಞಾನ, ಅಹಂಕಾರ ತೊಡೆದು ಏಕತೆ ಮೂಡಿಸುತ್ತವೆ’ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.