ADVERTISEMENT

6 ತಿಂಗಳ ಕಾಲ ಐವರು ಸದಸ್ಯರ ಅಮಾನತು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 8:10 IST
Last Updated 19 ಫೆಬ್ರುವರಿ 2012, 8:10 IST

ಮಂಡ್ಯ:  ನಗರಸಭೆಯಲ್ಲಿ ಆಡಳಿತರೂಢ ಜೆಡಿಎಸ್‌ನ ಆಂತರಿಕ ಕಲಹ ಉಲ್ಬಣಿಸಿದ್ದು, ಪಕ್ಷವು ಅಧ್ಯಕ್ಷರ ಪದಚ್ಯುತಿಗೆ ಅವಿಶ್ವಾಸ ನಿಲುವಳಿ ಮಂಡಿಸಲು ಸಿದ್ಧತೆ ನಡೆದಿದ್ದರೆ ಇತ್ತ ಜೆಡಿಎಸ್‌ನ ಐವರು ಸದಸ್ಯರನ್ನು ಆರು ತಿಂಗಳ ಕಾಲ ಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಿರುವ ಆದೇಶ ಹೊರಬಿದ್ದಿದೆ.

ನಗರಸಭೆಯ ಸಭಾಂಗಣದ ಗಾಂಭೀರ್ಯ ರಕ್ಷಿಸದ, ಫೆ.9ರ ಸಾಮಾನ್ಯ ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದಿರುವ ಕಾರಣಗಳಿಗೆ ಈ ಐವರು ಸದಸ್ಯರನ್ನು ಆರು ತಿಂಗಳ ಅವಧಿಗೆ ಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಿ ಅಮಾನತು ಪಡಿಸಲಾಗಿದೆ ಎಂದು ಆಯುಕ್ತರು ಆದೇಶದಲ್ಲಿ ವಿವರಿಸಿದ್ದಾರೆ

ನಗರಸಭೆಯ ಜೆಡಿಎಸ್‌ನ ಸದಸ್ಯರಾದ ಎಂ.ಜೆ. ಚಿಕ್ಕಣ್ಣ, ಎಸ್.ಪಿ. ಗೌರೀಶ್, ವಿ.ಎಂ. ಪದ್ಮಾವತಿ, ಶಂಕರೇಗೌಡ, ಎಂ.ಎನ್‌ಚಲುವರಾಜು ಅಮಾನತು ಗೊಂಡವರು. ಈ ಆದೇಶದ ಮೂಲಕ ತಮ್ಮ ಪದಚ್ಯುತಿಗೆ ಯತ್ನಿಸುತ್ತಿರುವ ಪಕ್ಷದ ವರಿಷ್ಠರ ವಿರುದ್ಧ ನಗರಸಭಾ ಅಧ್ಯಕ್ಷರು ಸಡ್ಡು ಹೊಡೆದಂತಾಗಿದೆ.

ಈಗಾಗಲೇ ಪಕ್ಷದ ಸೂಚನೆಯ ಮೇರೆಗೆ ಚಿಕ್ಕಣ್ಣ, ಗೌರೀಶ್, ಮತ್ತು ಕೆ.ಸಿ. ನಾಗಮ್ಮ ಸೇರಿದಂತೆ ಕೆಲ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ತುರ್ತಾಗಿ ಸಾಮಾನ್ಯ ಸಭೆ ಕರೆಯಬೇಕು ಎಂದು ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವುದನ್ನು ಸ್ಮರಿಸಬಹುದು.

ಈ ಹಿಂದೆ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ವರಿಷ್ಠರು ಸೂಚನೆ ನೀಡಿದ್ದರೂ, ಅದಕ್ಕೆ ಅಧ್ಯಕ್ಷರು ಸೊಪ್ಪು ಹಾಕಿರಲಿಲ್ಲ. ವರಿಷ್ಠ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಉಚ್ಚಾಟನೆ ಎಚ್ಚರಿಕೆ ಕೊಟ್ಟಿದ್ದರೂ ಅದೂ ಜಾರಿಗೆ ಬಂದಿರಲಿಲ್ಲ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಫೆ.9ರ ಸಾಮಾನ್ಯ ಸಭೆಯಲ್ಲಿ ವಾಗ್ಯುದ್ಧ, ಸಭಾಂಗಣ ಪ್ರವೇಶಕ್ಕೆ ನಿರ್ಬಂಧ ಮತ್ತಿತರ ಬೆಳವಣಿಗೆಗಳು ನಡೆದಿದ್ದವು. ಅಂದು ಐವರು ಸದಸ್ಯರನ್ನು ಆರು ತಿಂಗಳುಅಮಾನತುಪಡಿಸಲಾಗಿದೆ ಎಂದಿದ್ದರೂ, ಬಳಿಕ ದಿನದ ಮಟ್ಟಿಗೆ ಅಮಾನತುಪಡಿಸಲಾಗಿದೆ ಎಂದು ಅಧ್ಯಕ್ಷರು ಪ್ರಕಟಿಸಿದ್ದರು. ಇದು, ಗೊಂದಲ ಮೂಡಿಸಿತ್ತು.

ಆದರೆ, ಈಗ ಅಧಿಕೃತವಾಗಿ ಸೂಚನೆ ಹೊರಡಿಸುವ ಮೂಲಕ ಐವರು ಸದಸ್ಯರನ್ನು ಆರು ತಿಂಗಳ ಅವಧಿಗೆ ಅಮಾನತುಪಡಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಪುರಸಭೆ ಕಾಯ್ದೆ 1964ರ ನಿಯಮ 49ರ ಅನ್ವಯ ಹಾಗೂ ಅಧ್ಯಕ್ಷರಿಗೆ ಇರುವ ವಿಶೇಷ ಅಧಿಕಾರ ಬಳಸಿ ಪ್ರಾಕೃತಿಕ ನ್ಯಾಯದ ಅನುಸಾರ ಈ ಎಲ್ಲ ಸದಸ್ಯರನ್ನು ಅಮಾನತುಪಡಿಸಲಾಗಿದೆ ಎಂದು ಆಯುಕ್ತರು ಇದೇ 16ರಂದು ಹೊರಡಿಸಿರುವ ಆದೇಶದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.