ADVERTISEMENT

ಮಂಡ್ಯ: ಕಾರಾಗೃಹಗಳಲ್ಲಿ 90 ಕೈದಿಗಳ ಆತ್ಮಹತ್ಯೆ

10 ವರ್ಷಗಳಲ್ಲಿ 769 ಕೈದಿಗಳ ಸಾವು; 111 ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

ಸಿದ್ದು ಆರ್.ಜಿ.ಹಳ್ಳಿ
Published 11 ಮೇ 2025, 2:20 IST
Last Updated 11 ಮೇ 2025, 2:20 IST
ಮಂಡ್ಯ ಜಿಲ್ಲಾ ಕಾರಾಗೃಹದ ಹೊರನೋಟ 
ಮಂಡ್ಯ ಜಿಲ್ಲಾ ಕಾರಾಗೃಹದ ಹೊರನೋಟ    

ಮಂಡ್ಯ: ರಾಜ್ಯದ ಕಾರಾಗೃಹಗಳಲ್ಲಿ ಕಳೆದ 10 ವರ್ಷಗಳಲ್ಲಿ 769 ಕೈದಿಗಳು ಮೃತಪಟ್ಟಿದ್ದು, 90 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 79 ಕೈದಿಗಳ ಸಾವಿಗೆ ‘ನಿಖರ ಕಾರಣ’ವೇ ತಿಳಿದುಬಂದಿಲ್ಲ.

ನ್ಯಾಯಾಂಗ ಬಂಧನದಲ್ಲಿದ್ದಾಗ ಘರ್ಷಣೆ, ಆತ್ಮಹತ್ಯೆ, ಅಸಹಜ ಸಾವುಗಳ 47 ಪ್ರಕರಣಗಳಲ್ಲಿ, ಕರ್ತವ್ಯಲೋಪ ಆರೋಪದಡಿ 111 ಮಂದಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ. 

‘597 ಕೈದಿಗಳ ಸಾವನ್ನು ‘ಸ್ವಾಭಾವಿಕ’ ಎಂದು ಗುರುತಿಸಿದ್ದು, ಕೈದಿಗಳೊಂದಿಗೆ ಘರ್ಷಣೆಯಿಂದ ಮೂವರು ಮೃತಪಟ್ಟಿದ್ದಾರೆ’ ಎನ್ನುತ್ತವೆ ಕಾರಾಗೃಹ ಇಲಾಖೆಯ ದಾಖಲೆಗಳು. 

ADVERTISEMENT

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಹೆಚ್ಚು (325) ಕೈದಿಗಳು ಸತ್ತಿದ್ದಾರೆ. ಬೆಳಗಾವಿ– 61, ಮೈಸೂರು– 56, ಧಾರವಾಡ– 49, ಕಲಬುರಗಿ,–47, ಬಳ್ಳಾರಿ ಕಾರಾಗೃಹದಲ್ಲಿ 40 ಕೈದಿಗಳು ಅಸುನೀಗಿದ್ದಾರೆ.  

ಶಿಸ್ತು ಕ್ರಮ:

‘ಕರ್ತವ್ಯಲೋಪ ಪ್ರಕರಣದಲ್ಲಿ ವಾರ್ಷಿಕ ವೇತನ ಬಡ್ತಿ ಮುಂದೂಡಿಕೆ, ಸೇವೆಯಿಂದ ಅಮಾನತು, ಶೇ 25ರಷ್ಟು ಪಿಂಚಣಿಗೆ ತಡೆ, ಕಡ್ಡಾಯ ನಿವೃತ್ತಿ ಮೊದಲಾದ ಕ್ರಮಗಳನ್ನು ಅಧಿಕಾರಿ, ಸಿಬ್ಬಂದಿ ವಿರುದ್ಧ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಗಳು. 

ಬೆಂಗಳೂರಿನ ಜೀವನ್‌ಬಿಮಾ ನಗರ ಠಾಣೆಯಲ್ಲಿ 2016ರಲ್ಲಿ ವಿಚಾರಣೆಗೆ ಕರೆತಂದಿದ್ದ ವ್ಯಕ್ತಿಗೆ ಸಾವಿನ ಪ್ರಕರಣದಲ್ಲಿ ನಾಲ್ವರು ಪೊಲೀಸರಿಗೆ ಕೋರ್ಟ್‌ 7 ವರ್ಷ ಶಿಕ್ಷೆ ವಿಧಿಸಿದೆ. ಕೆಲ ಪ್ರಕರಣಗಳಲ್ಲಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಕೆಲ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.  

₹4.34 ಕೋಟಿ ಪರಿಹಾರ: 

‘ದಶಕದ ಅವಧಿಯಲ್ಲಿ ಅಸಹಜವಾಗಿ ಸಾವಿಗೀಡಾದ ಕೈದಿ ಅಥವಾ ವಿಚಾರಣಾಧೀನ ಕೈದಿಗಳ ಅವಲಂಬಿತರಿಗೆ ಗೃಹ ಇಲಾಖೆಯಿಂದ ಒಟ್ಟು ₹1.40 ಕೋಟಿ ಹಾಗೂ ಕಾರಾಗೃಹ ಇಲಾಖೆಯಿಂದ ₹2.94 ಕೋಟಿ ಪರಿಹಾರ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕೈದಿಗಳಲ್ಲಿ ಖಿನ್ನತೆ ನಿವಾರಿಸಲು ಯೋಗ ಧ್ಯಾನ ಸಾಕ್ಷರತೆ ಕೌಶಲ ತರಬೇತಿ ನೀಡುತ್ತಿದ್ದೇವೆ. ಆಪ್ತ ಸಮಾಲೋಚನೆಯನ್ನೂ ನಡೆಸಲಾಗುತ್ತಿದೆ
ಟಿ.ಕೆ. ಲೋಕೇಶ್‌ ಜಿಲ್ಲಾ ಕಾರಾಗೃಹ ಅಧೀಕ್ಷಕ ಮಂಡ್ಯ
ವಿಚಾರಣಾಧೀನ ಬಂದಿಗಳನ್ನು ನಡೆಸಿಕೊಳ್ಳುವ ಬಗ್ಗೆ ಸರ್ಕಾರ ನಿಯಮ ರೂಪಿಸಬೇಕು. ಕೈದಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಕಾರ್ಯಕ್ರಮ ರೂಪಿಸಬೇಕು
– ಎಚ್‌.ಸಿ. ಮಂಜುನಾಥ್‌ ಜಿಲ್ಲಾ ಘಟಕದ ಅಧ್ಯಕ್ಷ ಕನ್ನಡ ಸೇನೆ ಮಂಡ್ಯ

ಪೊಲೀಸ್‌ ವಶದಲ್ಲಿದ್ದ 367 ಆರೋಪಿಗಳ ಸಾವು

10 ವರ್ಷಗಳಲ್ಲಿ ಪೊಲೀಸ್‌ ವಶದಲ್ಲಿದ್ದಾಗ 367 ಆರೋಪಿಗಳು ಮೃತಪಟ್ಟಿದ್ದಾರೆ. ಹುಬ್ಬಳ್ಳಿ–ಧಾರವಾಡ ನಗರದಲ್ಲಿ 59 ಬೆಳಗಾವಿ ನಗರದಲ್ಲಿ 53 ಮೈಸೂರು ನಗರದಲ್ಲಿ 50 ಕಲಬುರಗಿ ನಗರದಲ್ಲಿ 45 ಮಂಗಳೂರು ನಗರದಲ್ಲಿ 24 ಆರೋಪಿಗಳು ಸಾವಿಗೀಡಾಗಿದ್ದಾರೆ ಎಂದು ಇಲಾಖೆ ಅಂಕಿಅಂಶಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.