ADVERTISEMENT

ನಂಜನಗೂಡಿನಲ್ಲಿ ಸೋಂಕು: ಮಂಡ್ಯದಲ್ಲಿ ಕಟ್ಟೆಚ್ಚರ!

ಸೋಂಕು ಪತ್ತೆಯಾದ ನಂಜನಗೂಡಿನ ಕಾರ್ಖಾನೆಯಲ್ಲಿ ಜಿಲ್ಲೆಯ 30ಕ್ಕೂ ಹೆಚ್ಚು ಮಂದಿ ಕೆಲಸ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 13:15 IST
Last Updated 30 ಮಾರ್ಚ್ 2020, 13:15 IST
   

ಮಂಡ್ಯ: ಮೈಸೂರು ಜಿಲ್ಲೆಯ ನಂಜನಗೂಡಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಅಲ್ಲಿ ಮಂಡ್ಯದ 30ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು ಎಂಬ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿರುವ ಔಷಧ ತಯಾರಿಕಾ ಕಾರ್ಖಾನೆಯ 5 ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ಈಗಾಗಲೇ ಧೃಡಪಟ್ಟಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ತಪಾಸಣೆ ಮಾಡಲಾಗಿತ್ತು. ಅಲ್ಲದೇ ಅವರನ್ನೆಲ್ಲಾ ಹೋಂ ಕ್ವಾರಂಟೈನ್‌ನಲ್ಲಿ ಇರಲು ಕಡ್ಡಾಯವಾಗಿ ಸೂಚಿಸಲಾಗಿತ್ತು.

30ಕ್ಕೂ ಹೆಚ್ಚು ಮಂದಿ ಜಿಲ್ಲೆಯವರು ಅಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರೂ ಊರಿಗೆ ಬಂದು ಸೋಂಕು ಹರಡಿಸಿಬಿಟ್ಟರೆ ಎಂಬ ಕಾಣದ ಭಯ ಜನರ ಮನಸ್ಸಿನಲ್ಲಿ ಮನೆ ಮಾಡಿದೆ. ಕೊರೊನಾ ಭೀತಿ ಹೆಚ್ಚಾಗಿದೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ‘ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯಲ್ಲಿ ಜಿಲ್ಲೆಯ 35 ಮಂದಿ ಕೆಲಸ ಮಾಡುತ್ತಿದ್ದರು. ಇವರಲ್ಲಿ 8 ಮಂದಿ ಜಿಲ್ಲೆಯಲ್ಲಿ ವಾಸ ಮಾಡುತ್ತಿದ್ದಾರೆ. ಅವರೆಲ್ಲರನ್ನು ಮಿಮ್ಸ್‌ ಐಸೋಲೇಷನ್‌ನಲ್ಲಿ ಇರಿಸಲಾಗಿದ್ದು, 14 ದಿನಗಳ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ತಿಳಿಸಿದರು.

‘ಉಳಿದ 27 ಜನರು ಮೈಸೂರು ಸೇರಿದಂತೆ ಇತರೆಡೆ ವಾಸಿಸುತ್ತಿದ್ದಾರೆ. ನಿಯಮಾನುಸಾರ ಮೈಸೂರು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿ 142 ಮಂದಿ ಇದ್ದಾರೆ. ಪ್ರಸ್ತುತ ಸರ್ಕಾರದ ಮಾರ್ಗಸೂಚಿಯಂತೆ ಕಟ್ಟುನಿಟ್ಟಾದ ಕ್ರಮವನ್ನು ಕೈಗೊಂಡು ಮನೆಯಿಂದ ಹೊರಗೆ ಬಾರದಂತೆ ಇರಿಸಲಾಗಿದೆ’ ಎಂದು ತಿಳಿಸಿದರು.

ವಿವಿಧ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸಿ ಜಿಲ್ಲೆಗೆ 484 ಜನ ಬಂದಿದ್ದು, ಅವರನ್ನು ವಿವಿಧ ಹಾಸ್ಟೆಲ್‌ನಲ್ಲಿ ಇರಿಸಿ ಮೂಲ ಸೌಲಭ್ಯದೊಂದಿಗೆ ನಿಗಾ ಇಡಲಾಗಿದೆ. ಜಿಲ್ಲೆಯಾದ್ಯಂತ 9 ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರು ಹೆಚ್ಚಿನ ಜಾಗೃತಿ ವಹಿಸಬೇಕು ಒಬ್ಬರಿಂದ ಒಬ್ಬರಿಗೆ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಗುಂಪು ಗುಂಪಾಗಿ ಯಾರು ಸೇರಬಾರದು ಗ್ರಾಮೀಣ ಭಾಗದ ಜನರು ಕೋರೊನಾ ಸೇನಾನಿಗಳಾಗಿ ಕಾರ್ಯ ನಿರ್ವಹಿಸಬೇಕು, ಕೊರೊನಾ ವೈರಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.