ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಗ್ರಾಮದ ಈಶ್ವರ ದೇವಸ್ಥಾನದ ಬಳಿ ಇರುವ ರಾಶಿ ಕಲ್ಲು ಚಕ್ರ ದುಃಸ್ಥಿತಿಯಲ್ಲಿದೆ.
ಮಳೆ-ಬೆಳೆ, ಬೇಸಾಯ, ಭವಿಷ್ಯದ ಬದುಕು- ಬವಣೆ ಮುಂತಾದವುಗಳನ್ನು ಗ್ರಾಮೀಣ ಜನರಿಗೆ ಸುಲಭವಾಗಿ ಅರ್ಥೈಸಿ ಅವರ ಸಂಕಟವನ್ನು ದೂರ ಮಾಡುವ ಸಲುವಾಗಿ ಈಶ್ವರ ದೇವಸ್ಥಾನಗಳ ಬಳಿ ರಾಶಿ ಚಕ್ರದ ಕಲ್ಲು ಹೊತ್ತ ಕಿರಣಸ್ತಂಭಗಳನ್ನು ಹಿರಿಯರು ಸ್ಥಾಪಿಸುತ್ತಿದ್ದರು.
ಶೀಳನೆರೆ ಪ್ರಾಚೀನ ಗ್ರಾಮವಾಗಿದ್ದು, ಹೊಯ್ಸಳ ಅರಸರ ಕಾಲದಲ್ಲಿ ಕೆರೆಯ ಮುಂಭಾಗ ಈಶ್ವರ ದೇವಸ್ಥಾನವನ್ನು ನಿರ್ಮಿಸಿ ಅದರ ಮುಂದೆ ಈ ರಾಶಿ ಚಕ್ರದ ಕಲ್ಲನ್ನು ಸ್ಥಾಪಿಸಲಾಗಿದೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. 3–4 ಅಡಿ ಎತ್ತರದ ಕಿರಣಸ್ತಂಭದ ಮೇಲೆ ಈ ರಾಶಿ ಚಕ್ರದ ಶಿಲ್ಪವನ್ನು ಸ್ಥಾಪಿಸಿದ್ದು, ಇದು ಮೂರು ಅಡಿ ಅಗಲ ಎರಡು ಅಡಿ ಎತ್ತರ ಹೊಂದಿದೆ.
ಕಳೆದ ವರ್ಷ ಈಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಸಮಯದಲ್ಲಿ ಈ ರಾಶಿಚಕ್ರ ಕಲ್ಲು ಕೆರೆಯೊಳಗೆ ಮುಳುಗಿ ಹೋಗಿತ್ತು. ಅದರ ಮಹತ್ವವನ್ನು ಅರಿತ ಇತಿಹಾಸ ಸಂಶೋಧಕ ತೈಲೂರು ವೆಂಕಟ ಕೃಷ್ಣರವರು ರಾಶಿ ಕಲ್ಲಿನ ಮಹತ್ವವನ್ನು ಗ್ರಾಮಸ್ಥರಿಗೆ ತಿಳಿಸಿದ್ದರಿಂದ ಮುಳುಗಿಹೋಗಿದ್ದ ರಾಶಿ ಕಲ್ಲಿನ ಚಕ್ರವನ್ನು ಕೆರೆಯಿಂದ ಮೇಲೆತ್ತಲಾಯಿತು. ಆದರೂ ಈ ಕಿರಣಸ್ತಂಭ ನೀರೊಳಗಿನ ಬದಿಯಲ್ಲಿ ಮುಳುಗಿಹೋಗಿದೆ.
ರಾಶಿ ಚಕ್ರ ಕಲ್ಲು ಶಿಲ್ಪ ನಯನ ಮನೋಹರವಾಗಿದ್ದು, ಚಕ್ರದೊಳಗೆ ದ್ವಾದಶ ಆದಿತ್ಯರ ಕೆತ್ತನೆಯಿದೆ. ಚಕ್ರದ ಸುತ್ತ ದ್ವಾದಶ ರಾಶಿಗಳಿದ್ದು, ರಾಶಿಗಳನ್ನು ಪ್ರತಿನಿಧಿಸುವ ಚಿಹ್ನೆಗಳ ಚಿತ್ರಗಳಿವೆ. ಸಪ್ತಾಶ್ವದೊಂದಿಗೆ ರಥದಲ್ಲಿರುವ ಅರುಣನ ಶಿಲ್ಪದ ಕೆತ್ತನೆಯ ನಂತರ ಉಳಿದ ರಾಶಿಗಳ ಚಿತ್ರಗಳು ಸುಂದರವಾಗಿ ಕೆತ್ತಲ್ಪಟ್ಟಿವೆ. ರಾಶಿಚಕ್ರದ 12 ರಾಶಿ ಮತ್ತು ದ್ವಾದಶ ಆದಿತ್ಯರಿಗೆ ಅಭಿಷೇಕ ಮಾಡಿದಾಗ ಗಾಳಿ, ಭೀತಿಯ ತೊಂದರೆಗಳಿಗೆ ಒಳಗಾದವರು ಈ ರಾಶಿ ಕಲ್ಲಿನ ಚಕ್ರದ ಮಕರರಾಶಿಯ ಅಡಿಯಲ್ಲಿ ಕುಳಿತು ರಾಶಿ ಚಕ್ರದ ಮೇಲಿಂದ ಬರುವ ಅಭಿಷೇಕದ ನೀರಿಗೆ ತಮ್ಮ ಶಿರವನ್ನು ಒಡ್ಡಿ ತೀರ್ಥಸ್ನಾನ ಮಾಡುತಿದ್ದರಂತೆ. ಇದರಿಂದ ಗೃಹದೋಷಗಳು ನಿವಾರಣೆಯಾಗುತ್ತದೆ ಎಂಬುದು ನಂಬಿಕೆಯಾಗಿತ್ತು.
‘ಪ್ರತಿ ಯುಗಾದಿ ಹಬ್ಬ ಮತ್ತು ದೀಪಾವಳಿ ಹಬ್ಬದ ಸಂದರ್ಭ ಈ ಚಕ್ರವನ್ನೇ ಬಳಸಿಕೊಂಡು ಆದಿತ್ಯಾದಿ ನವಗ್ರಹಗಳ ಚಲನೆ, ಗುರುಬಲ, ಶನಿ ಬಲವನ್ನು ನೋಡಿ ಗ್ರಹಗಳು ಇರುವ ಸ್ಥಾನಗಳನ್ನು ತಿಳಿಸಿ ವರ್ಷ ಭವಿಷ್ಯ ಹೇಳಲಾಗುತಿತ್ತು’ ಎಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಿಂತಕ ಗೋಪಾಲಕೃಷ್ಣ ಅವಧಾನಿ ಹೇಳುತ್ತಾರೆ.
ದೇವಸ್ಥಾನದ ಬಳಿ ಇರುವ ಈ ರಾಶಿಕಲ್ಲಿನ ಚಕ್ರವನ್ನು ಸ್ವಚ್ಛಗೊಳಿಸಿ, ಶಿಲ್ಪವನ್ಬು ಹೊಳಪು ಮಾಡಿ ಸುಮಾರು ಐದು ಅಡಿ ಎತ್ತರದ ಕಿರಣ ಸ್ತಂಭವನ್ನು ನಿರ್ಮಿಸಿ ಅದರ ಮೇಲೆ ಇದನ್ನು ಕೂರಿಸಿ ಜನರಿಗೆ ಇದರ ಮಹತ್ವ ತಿಳಿಸುವ ಕಾರ್ಯ ಮಾಡಬೇಕಿದೆ. ಪುರಾತನ ಆಚಾರ, ವಿಚಾರ ಸಂಸ್ಕೃತಿ ಮತ್ತು ಯನ್ನು ಬೆಸೆಯುವ ಇಂತಹ ಅಪರೂಪದ ಸ್ಮಾರಕಗಳು ಉಳಿಯಬೇಕು. ಇಂತಹ ಅಪರೂಪದ ರಾಶಿಕಲ್ಲಿನ ಚಕ್ರ ಈಗ ದುಃಸ್ಥಿತಿಯಲ್ಲಿದ್ದು ರಕ್ಷಣೆ ಇಲ್ಲದೇ ಹಾಳಾಗುತ್ತಿದ್ದು, ಅದರೊಳಗಿನ ಶಿಲ್ಪಗಳು ನಶಿಸುತ್ತವೆ.
ಇದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಮತ್ತು ಸಂಬಂಧಪಟ್ಟ ಇಲಾಖೆಯವರು ಗಮನಹರಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.