ADVERTISEMENT

ಎಸಿ, ವಕೀಲ ಮಾತಿನ ಚಕಮಕಿ: ಡಿಸಿಯಿಂದ ಸಂಧಾನ

ಉಪವಿಭಾಗಾಧಿಕಾರಿ ಕ್ಷಮೆಯಾಚನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 14:47 IST
Last Updated 20 ಮಾರ್ಚ್ 2025, 14:47 IST
ಪಾಂಡವಪುರ ತಾಲ್ಲೂಕು ಆಡಳಿತ ಸೌಧದಲ್ಲಿ ಎಸಿ–ವಕೀಲ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಸಭೆ ಬಳಿಕ ಜಿಲ್ಲಾಧಿಕಾರಿ ಕುಮಾರ್ ಅವರು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಮಂಜುನಾಥ್ ಅವರೊಂದಿಗೆ ಚರ್ಚಿಸಿದರು. ತಹಶೀಲ್ದಾರ್ ಎಸ್.ಸಂತೋಷ್ ಹಾಗೂ ವಕೀಲರು ಪಾಲ್ಗೊಂಡಿದ್ದರು
ಪಾಂಡವಪುರ ತಾಲ್ಲೂಕು ಆಡಳಿತ ಸೌಧದಲ್ಲಿ ಎಸಿ–ವಕೀಲ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಸಭೆ ಬಳಿಕ ಜಿಲ್ಲಾಧಿಕಾರಿ ಕುಮಾರ್ ಅವರು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಮಂಜುನಾಥ್ ಅವರೊಂದಿಗೆ ಚರ್ಚಿಸಿದರು. ತಹಶೀಲ್ದಾರ್ ಎಸ್.ಸಂತೋಷ್ ಹಾಗೂ ವಕೀಲರು ಪಾಲ್ಗೊಂಡಿದ್ದರು   

ಪಾಂಡವಪುರ: ಎಸಿ ಹಾಗೂ ವಕೀಲ ಮಾತಿನ ಚಕಮಕಿ, ವಕೀಲ ಬಂಧನ, ವಕೀಲರ ಪ್ರತಿಭಟನೆ ಪ್ರಕರಣ ಸಂಬಂಧ ಎಸಿ ಹಾಗೂ ವಕೀಲರ ಸಭೆ ನಡೆಸಿದ ಜಿಲ್ಲಾಧಿಕಾರಿ ಕುಮಾರ ಇಬ್ಬರ ನಡುವೆ ಸಂಧಾನ ನಡೆಸಿ ಪ್ರಕರಣಕ್ಕೆ ಗುರುವಾರ ತೆರೆ ಎಳೆದರು.

ಮಾ.11ರಂದು ಪಾಂಡವಪುರ ತಾಲ್ಲೂಕು ಆಡಳಿತ ಸೌಧದಲ್ಲಿ ಉಪ ಉಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್ ಅವರನ್ನು ಕೆ.ಆರ್.ಪೇಟೆ ವಕೀಲ ಅಮಿತ್ ಅವರು ಭೇಟಿ ಮಾಡಿ ತನ್ನ ಜಮೀನಿನ ವಿಚಾರದಲ್ಲಿ ಚರ್ಚಿಸುತ್ತಿದ್ದಾಗ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಸಿಟ್ಟಾದ ಎಸಿ ಶ್ರೀನಿವಾಸ್ ಅವರು ಪೊಲೀಸ್ ಇನ್‌ಸ್ಪೆಕ್ಟರ್‌ ಅವರನ್ನು ಸ್ಥಳಕ್ಕೆ ಕರೆಸಿ, ವಕೀಲನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದರು.

ಪೊಲೀಸ್ ಠಾಣೆಯಿಂದ ಬಿಡುಗಡೆಗೊಂಡ ವಕೀಲ ಅಮಿತ್ ಅವರು, ‘ನಮ್ಮ ಜಮೀನಿನ ವ್ಯಾಜ್ಯ ಎಸಿ ಅವರ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಈ ವಿಚಾರದಲ್ಲಿ ಎಸಿ ಅವರು ಮಧ್ಯವರ್ತಿಗಳ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಜಮೀನಿನ ವಿಚಾರದಲ್ಲಿ ಚರ್ಚೆ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದರು. ಅಲ್ಲದೇ ಮಾ.13ರಂದು ಜಿಲ್ಲಾ ವಕೀಲರ ಸಂಘ ಹಾಗೂ ಪಾಂಡವಪುರ ಉಪ ವಿಭಾಗದ ಮಟ್ಟದ ವಕೀಲರ ಸಂಘವು ಸಭೆ ನಡೆಸಿ ಪ್ರತಿಭಟನೆ ನಡೆಸಿದ್ದವು.

ADVERTISEMENT

‘ವಕೀಲ ಅಮಿತ್ ಅವರೊಡನೆ ನಾನು ಆ ರೀತಿ ವರ್ತಿಸಬಾರದಿತ್ತು. ಅಲ್ಲದೇ ಅಮಿತ್ ಅವರನ್ನು ಪೊಲೀಸರ ವಶಕ್ಕೆ ನೀಡಿದ್ದಕ್ಕೆ ಕ್ಷಮೆ ಯಾಚಿಸಿದ ಎಸಿ ಶ್ರಿನಿವಾಸ್, ಇನ್ನು ಮುಂದೆ ವಕೀಲರು, ರೈತರು, ಸಾರ್ವಜನಿಕರ ಅಹವಾಲುಗಳನ್ನು ತಾಳ್ಮೆ ಮತ್ತು ವ್ಯವಧಾನದಿಂದ ಆಲಿಸುತ್ತೇನೆ’ ಎಂದು ಸಭೆಗೆ ತಿಳಿಸಿದರು.

ತನಿಖೆಯಾಗಲಿ:

‘ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಎಸಿ ಶ್ರೀನಿವಾಸ್ ಅವರು ವಕೀಲ ಅಮಿತ್ ಅವರಲ್ಲಿ ಲಂಚದ ಬೇಡಿಕೆ ಇಟ್ಟ ಬಗ್ಗೆ ಲೋಕಾಯುಕ್ತ ತನಿಖೆಯಾಗಲಿ’ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸ್ಥಳಾಂತರ: ಎಸಿ ಕಚೇರಿಯಲ್ಲಿನ ಕೆಲವು ಸಿಬ್ಬಂದಿಯನ್ನು ಬೇರೆ ವಿಭಾಗಕ್ಕೆ ಸ್ಥಳಾಂತರಿಸಲು ಕೂಡ ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್, ಮಂಡ್ಯ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ, ಪಾಂಡವಪುರ ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ, ಕಾರ್ಯದರ್ಶಿ ನಾಗರಾಜು, ಕೆ.ಆರ್.ಪೇಟೆ ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ, ಕಾರ್ಯದರ್ಶಿ ಮಂಜೇಗೌಡ, ಉಪಾಧ್ಯಕ್ಷ ಪುರುಷೋತ್ತಮ, ವಕೀಲ ಅಮಿತ್, ಶ್ರೀರಂಗಪಟ್ಟಣ ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.