ADVERTISEMENT

ವೀಳ್ಯದೆಲೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಲು ಕ್ರಮ: ಶಾಸಕ ನರೇಂದ್ರ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ಮೇ 2024, 13:06 IST
Last Updated 7 ಮೇ 2024, 13:06 IST
ಹಲಗೂರು ಸಮೀಪದ ಬಾಳೆಹೊನ್ನಿಗ ಗ್ರಾಮಕ್ಕೆ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಭೇಟಿ ನೀಡಿ ನಷ್ಟಕ್ಕೊಳಗಾದ ವೀಳ್ಯದೆಲೆ ಬೆಳೆಗಾರರಿಂದ ಮಾಹಿತಿ ಪಡೆದರು
ಹಲಗೂರು ಸಮೀಪದ ಬಾಳೆಹೊನ್ನಿಗ ಗ್ರಾಮಕ್ಕೆ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಭೇಟಿ ನೀಡಿ ನಷ್ಟಕ್ಕೊಳಗಾದ ವೀಳ್ಯದೆಲೆ ಬೆಳೆಗಾರರಿಂದ ಮಾಹಿತಿ ಪಡೆದರು   

ಹಲಗೂರು: ‘ರೈತರ ಜೀವನಾಧಾರ ಆಗಿದ್ದ ವೀಳ್ಯದೆಲೆ ತೋಟಗಳು ಬಿರುಗಾಳಿಗೆ ಸಿಲುಕಿ ನೆಲ ಕಚ್ಚಿದ್ದು, ನಷ್ಟ ಉಂಟಾಗಿರುವ ಬೆಳೆಗಾರರಿಗೆ ಸಾಂದರ್ಭಿಕ ಪರಿಹಾರದ ಜೊತೆಗೆ, ಸೂಕ್ತ ಬೆಳೆ ಪರಿಹಾರ ಸಹ ನೀಡಲು ಕ್ರಮ ವಹಿಸಲಾಗುವುದು’ ಎಂದು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಭರವಸೆ ನೀಡಿದರು.

ಸಮೀಪದ ಬಾಳೆ ಹೊನ್ನಿಗ ಗ್ರಾಮದಲ್ಲಿ ಬಿರುಗಾಳಿಗೆ ಸಿಲುಕಿ ನಷ್ಟಕ್ಕೊಳಗಾದ ವೀಳ್ಯದೆಲೆ ಬೆಳೆಗಾರರನ್ನು ಭೇಟಿ ಮಾಡಿ ನಂತರ ಮಾತನಾಡಿದರು.

‘ಹಲಗೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ನಾಲ್ಕು ದಿನಗಳ ಹಿಂದೆ ಆಕಸ್ಮಿಕ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ನೂರಾರು ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನಿರಂತರ ಶ್ರಮದಿಂದ ಕಷ್ಟ ಪಟ್ಟು ಬೆಳೆದಿದ್ದ ವೀಳ್ಯದೆಲೆ, ಬಾಳೆ ಸೇರಿದಂತೆ ವಿವಿಧ ಬಗೆಯ ಬೆಳೆಗಳು ನೆಲ ಕಚ್ಚಿವೆ. ವಿವಿಧ ಗ್ರಾಮಗಳ ಮನೆಗಳ ಚಾವಣಿ ಹಾನಿಗೊಳಗಾದ ಮಾಹಿತಿ ದೊರಕಿದೆ. ಸಂತ್ರಸ್ತರಿಗೆ ಮತ್ತು ನಷ್ಟಕ್ಕೊಳಗಾದ ರೈತರಿಗೆ ಸರ್ಕಾರದ ವತಿಯಿಂದ ಸಿಗುವ ಪರಿಹಾರವನ್ನು ದೊರಕಿಸಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಬೆಳೆ ನಷ್ಟಕ್ಕೀಡಾದ ರೈತರ ಬಳಿ ದಾಖಲೆಗಳನ್ನು ಸಂಗ್ರಹಿಸಿ, ಸಂಬಂಧಿಸಿದ ಇಲಾಖೆಗೆ ತುರ್ತಾಗಿ ಸಲ್ಲಿಸುವಂತೆ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಮಧುಸೂದನ್ ಅವರಿಗೆ ಸೂಚಿಸಿದರು.

ಹಲಗೂರು ಸಮೀಪದ ಬಾಳೆಹೊನ್ನಿಗ ಗ್ರಾಮದಲ್ಲಿ ಬಿರುಗಾಳಿಗೆ ಸಿಲುಕಿ ನೆಲ ಕಚ್ಚಿದ ವೀಳ್ಯದೆಲೆ ತೋಟವನ್ನು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಶಿವಣ್ಣ ಪ್ರಕಾಶ್ ಚಂದ್ರಕುಮಾರ್ ರವೀಶ್ ಶಿವಸ್ವಾಮಿ ಸೇರಿದಂತೆ ಹಲವರು ಇದ್ದರು.

ಈ ಸಂದರ್ಭದಲ್ಲಿ ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಸ್.ಶಿವಣ್ಣ ಯೂತ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ.ಕೃಷ್ಣಮೂರ್ತಿ, ಮುಖಂಡರಾದ ಕೆಂಪಯ್ಯ ಸಾಗ್ಯ, ಕುಂತೂರು ಗೋಪಾಲ್, ಚಂದ್ರಕುಮಾರ್, ಎಂ.ಶಿವಸ್ವಾಮಿ, ಬಿ.ಜಿ.ಕುಮಾರ್, ಬಿ.ವಿ.ಪ್ರಕಾಶ್, ರವಿ, ಬಿ.ಎಸ್.ಮಹೇಶ್ ಕುಮಾರ್, ಮರಿಸ್ವಾಮಿ, ಜೀವನ್ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.