ADVERTISEMENT

‘ಕಾಂಗ್ರೆಸ್ಸಿಗರ ಬೆಂಬಲ ಪಡೆದು ಗೆದ್ದವರಿಗೆ ಬಿಜೆಪಿ ಮಾತ್ರ ನೆನಪಾಗುತ್ತಿದೆ’

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 16:31 IST
Last Updated 12 ಅಕ್ಟೋಬರ್ 2019, 16:31 IST
   

ಮಂಡ್ಯ: ಸಂಸದೆ ಎ.ಸುಮಲತಾ ಬಿಜೆಪಿ ಕಚೇರಿಗೆ ಭೇಟಿ ನೀಡಿರುವುದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ ಮುಂದುವರಿದಿದೆ. ಗುರುವಾರ ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ಸುಮಲತಾ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿ ಸುಮಲತಾ ಅವರು ಸೆರಗೊಡ್ಡಿ ಮತಭಿಕ್ಷೆ ಕೇಳಿದ್ದರು. ಆದರೆ ಗೆದ್ದ ನಂತರ ಬಿಜೆಪಿ ಕಚೇರಿ ಮಾತ್ರ ನೆನಪಿಗೆ ಬಂದಿದೆ. ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರೂ ಬೆಂಬಲ ನೀಡಿದ್ದಾರೆ. ಈಗ ಕಾಂಗ್ರೆಸ್‌ ಕಚೇರಿ ನೆನಪಿಗೆ ಬರಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಸುಮಲತಾ ಅವರು ಏನು ಎಂಬುದು ಜಿಲ್ಲೆಯ ಜನರು ತಿಳಿದುಕೊಳ್ಳಬೇಕಿದೆ. ಜಿಲ್ಲೆಯ ಜನ ಮುಟ್ಟಾಳರಲ್ಲ, ಸ್ವಾಭಿಮಾನಿಗಳು ಎನ್ನುತ್ತಿದ್ದ ಅವರು ಜನರನ್ನು ಮುಟ್ಟಾಳರನ್ನಾಗಿ ಮಾಡಲು ಹೊರಟಿದ್ದಾರೆ. ಇದನ್ನು ಜನ ಸಹಿಸುವುದಿಲ್ಲ. ತಕ್ಕ ಪಾಠ ಕಲಿಸುತ್ತಾರೆ. ಅಧಿಕಾರಕ್ಕಾಗಿ ಅವರು ಯಾವ ರೀತಿಯಲ್ಲಾದರೂ ಬದಲಾಗುತ್ತಾರೆ ಎಂಬುದಕ್ಕೆ ಸುಮಲತಾ ಅವರೇ ಉದಾಹರಣೆ’ ಎಂದರು.

ADVERTISEMENT

‘ಜನರು ಪಕ್ಷಾತೀತ, ಜಾತ್ಯತೀತ, ಧರ್ಮಾತೀತವಾಗಿ ಮತ ನೀಡಿ ಗೆಲ್ಲಿಸಿದ್ದರು. ಮಂಡ್ಯದಲ್ಲಿ ಹೇಳ ಹೆಸರಿಲ್ಲದ ಬಿಜೆಪಿ ಕಚೇರಿಗೆ ಹೋಗಿ ಕೃತಜ್ಞತೆ ಸಲ್ಲಿಸುತ್ತಾರೆ ಅಂದರೆ ಜನರು ಅಧಿಕಾರಕ್ಕೆ ಏನೆಲ್ಲಾ ಮಾಡುತ್ತಾರೆ ಎಂಬುದು ತಿಳಿಯುತ್ತದೆ’ ಎಂದರು ಹೇಳಿದರು.

ಡಾ.ರವೀಂದ್ರ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ‘ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವುದು ತಪ್ಪಲ್ಲ. ಆದರೆ ಅದಕ್ಕಾಗಿ ಬಿಜೆಪಿ ಕಚೇರಿಗೆ ತೆರಳುವುದು ಎಷ್ಟು ಸರಿ? ಸುಮಲತಾ ಅವರು ಸ್ವಾಭಿಮಾನದ ಅಭ್ಯರ್ಥಿಯಾಗಿದ್ದರು, ಅವರಿಗೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಿದ್ದರು, ಕಾಂಗ್ರೆಸ್‌ ಬೆಂಬಲವೂ ಇತ್ತು. ನಾಳೆ ಕಾಂಗ್ರೆಸ್‌ ಕಚೇರಿಗೂ ಭೇಟಿ ನೀಡುತ್ತಾರಾ? ಜಿಲ್ಲಾ ಪ್ರವಾಸ ಕೈಗೊಂಡು ಸರ್ವರಿಗೂ ಕೃತಜ್ಞತೆ ಸಲ್ಲಿಸಬಹುದಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.