ADVERTISEMENT

ಬೇಬಿಬೆಟ್ಟ: ಕ್ಯಾಮೆರಾ, ಡ್ರೋಣ್‌ ಬಳಕೆಗೆ ಸಿದ್ಧತೆ

ನಿಷೇಧದ ನಡುವೆಯೂ ಅಕ್ರಮ ಗಣಿಗಾರಿಕೆ, ಕಲ್ಲು ಸಾಗಾಣಿಕೆ ವಿರುದ್ಧ ಜಿಲ್ಲಾಡಳಿತ ಕ್ರಮ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 4:53 IST
Last Updated 28 ಅಕ್ಟೋಬರ್ 2020, 4:53 IST

ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಹಾಗೂ ಅಕ್ರಮ ಕಲ್ಲು ಸಾಗಾಣಿಕೆ ತಡೆಗಟ್ಟಲು ಗಣಿಗಾರಿಕೆ ಪ್ರದೇಶ, ರಸ್ತೆಗಳು ಹಾಗೂ ಚೆಕ್ ಪೋಸ್ಟ್‌ಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಹಾಗೂ ಡ್ರೋಣ್‌ ಬಳಕೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.

ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯ ಹಾಗೂ ಪ್ರಾಕೃತಿಕ ಸಂಪತ್ತನ್ನು ಅಕ್ರಮವಾಗಿ ನಾಶ ಮಾಡಲಾಗುತ್ತಿದೆ ಎನ್ನುವ ಆರೋಪದಡಿ ಜಿಲ್ಲಾಡಳಿತ ಬೇಬಿ ಬೆಟ್ಟದಲ್ಲಿ ಗಣಿ ಚಟುವಟಿಕೆಯನ್ನು ನಿಷೇಧಿಸಲಾಗಿದೆ. ಆದರೆ ರಾತ್ರಿ ವೇಳೆ ಅಕ್ರಮವಾಗಿ ಗಣಿ ಚಟುವಟಿಕೆ ನಡೆಸಲಾಗುತ್ತಿದೆ, ಕಲ್ಲುಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಕಾರಣ ಅಕ್ರಮ ಚಟುವಟಿಕೆ ಪತ್ತೆಗೆ ಸಿ.ಸಿ ಟಿ.ವಿ ಕ್ಯಾಮೆರಾ ಹಾಗೂ ಡ್ರೋಣ್‌ ಬಳಸುವ ಚಿಂತನೆ ನಡೆಸಲಾಗಿದೆ.

ಗಣಿ ಇಲಾಖೆಯಿಂದ ಫಾರಂ 'ಸಿ' ಹೊಂದಿರುವ ಸ್ಟೋನ್ ಕ್ರಷರ್‌ಗಳಿಗೆ ಹೊರಗಡೆಯಿಂದ ಕಲ್ಲು ತಂದು ಕ್ರಷಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೂ ಕದ್ದುಮುಚ್ಚಿ ಅಕ್ರಮವಾಗಿ ನಡೆಯುತ್ತಿದ್ದ ಸುಮಾರು 30ಕ್ಕೂ ಹೆಚ್ಚು ಕಲ್ಲು ಗಣಿಗಳನ್ನು ಬಂದ್‌ ಮಾಡಲಾಗಿದೆ. ಮತ್ತೆ ಚಟುವಟಿಕೆ ನಡೆಸದಂತೆ 70ಕ್ಕೂ ಅಧಿಕ ಕಂದಕ ನಿರ್ಮಿಸಿ ಗಿಡಗಳನ್ನು ನೆಡಿಸಿದ್ದರು. ಅಲ್ಲದೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆದು ದಂಡ ಕಟ್ಟಿಸಿ ಕಾನೂನು ರೀತಿ ಕ್ರಮ ವಹಿಸಲಾಗಿತ್ತು.

ADVERTISEMENT

ಅಕ್ರಮ ಸಾಗಾಣಿಕೆ ತಡೆಗೆ ಸಾಕಷ್ಟು ಚೆಕ್‌ಪೋಸ್ಟ್‌ಗಳನ್ನೂ ನಿರ್ಮಿಸಿದ್ದರು. ಅಲ್ಲದೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸುಮಾರು 30ಕ್ಕೂ ಹೆಚ್ಚು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೋಡೆಲ್‌ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು. ಇದರ ನಡುವೆಯೂ ಅಲ್ಲಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ, ಅಲ್ಲದೆ ಕಲ್ಲು ಸಾಗಾಣಿಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

‘ಬೇಬಿಬೆಟ್ಟದ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ, ರಸ್ತೆಗಳಲ್ಲಿ, ಚೆಕ್ ಪೋಸ್ಟ್‌ಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ಅಕ್ರಮ ಕಲ್ಲು ಗಣಿಗಾರಿಕೆಯ ಕುರಿತು ಚಿತ್ರ ಕ್ಲಿಕ್ಕಿಸಲು ಡ್ರೋಣ್‌ ಕ್ಯಾಮೆರಾ ಬಳಕೆ ಮಾಡಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಅನುಮತಿ ದೊರೆತಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಟಿ.ವಿ.ಪುಷ್ಪಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.