ADVERTISEMENT

ಶ್ರೀರಂಗಪಟ್ಟಣ: ಹರ್ಷ ಚಿತಾಭಸ್ಮ ಕಾವೇರಿ ನದಿಯಲ್ಲಿ ವಿಸರ್ಜನೆ

ಮಸೀದಿ ಖಾಲಿ ಮಾಡದಿದ್ದರೆ ಶ್ರೀರಂಗಪಟ್ಟಣ ಚಲೋ; ಪ್ರಮೋದ್‌ ಮುತಾಲಿಕ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 19:37 IST
Last Updated 24 ಫೆಬ್ರುವರಿ 2022, 19:37 IST
ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಯಲ್ಲಿ ಹರ್ಷ ಅವರ ಚಿತಾಭಸ್ಮವನ್ನು ವಿಸರ್ಜಿಸುವ ಮುನ್ನ ಚಿತಾಭಸ್ಮ ಕುಡಿಕೆಗೆ ವೈದಿಕರು ಅಸ್ಥಿ ಸಂಚಯನದ ವಿಧಿ, ವಿಧಾನಗಳನ್ನು ಪೂರೈಸಿದರು. ಪ್ರಮೋದ್‌ ಮುತಾಲಿಕ್‌, ಋಷಿಕುಮಾರ ಸ್ವಾಮೀಜಿ ಇದ್ದಾರೆ
ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಯಲ್ಲಿ ಹರ್ಷ ಅವರ ಚಿತಾಭಸ್ಮವನ್ನು ವಿಸರ್ಜಿಸುವ ಮುನ್ನ ಚಿತಾಭಸ್ಮ ಕುಡಿಕೆಗೆ ವೈದಿಕರು ಅಸ್ಥಿ ಸಂಚಯನದ ವಿಧಿ, ವಿಧಾನಗಳನ್ನು ಪೂರೈಸಿದರು. ಪ್ರಮೋದ್‌ ಮುತಾಲಿಕ್‌, ಋಷಿಕುಮಾರ ಸ್ವಾಮೀಜಿ ಇದ್ದಾರೆ   

ಶ್ರೀರಂಗಪಟ್ಟಣ: ಶಿವಮೊಗ್ಗದಲ್ಲಿ ಹತ್ಯೆಯಾದ ಭಜರಂಗದಳ ಸಂಘಟನೆಯ ಕಾರ್ಯಕರ್ತ ಹರ್ಷ ಅವರ ಚಿತಾಭಸ್ಮವನ್ನು ಗುರುವಾರ ಪಟ್ಟಣದ ಪಶ್ಚಿಮವಾಹಿನಿ ಬಳಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌, ಕಾಳಿ ಮಠದ ಋಷಿ ಕುಮಾರ ಸ್ವಾಮೀಜಿ ಪೂಜಾ ಕಾರ್ಯ ನೆರವೇರಿಸಿ ಅಸ್ಥಿಯನ್ನು ನದಿಯಲ್ಲಿ ವಿಸರ್ಜಿಸಿದರು. ಹರ್ಷ ಕುಟುಂಬದ ಯಾವೊಬ್ಬ ಸದಸ್ಯರೂ ಇರಲಿಲ್ಲ, ಬಜರಂಗದಳ, ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು ‘ಜೈಶ್ರೀರಾಮ್‌, ಹರ್ಷ ಅಮರ್‌ ರಹೇ’ ಘೋಷಣೆ ಕೂಗಿದರು.

ಚಿತಾಭಸ್ಮದ ಕುಡಿಕೆಯನ್ನು ಋಷಿಕುಮಾರ ಸ್ವಾಮೀಜಿ 100 ಮೀಟರ್‌ ದೂರ ತಲೆಯ ಮೇಲೆ ಹೊತ್ತು ನದಿ ತೀರಕ್ಕೆ ತಂದರು. ಕಾವೇರಿ ನದಿಯ ದಡದಲ್ಲಿಟ್ಟು ವಿಸರ್ಜನಾ ಪೂರ್ವ ವಿಧಿ, ವಿಧಾನ ನಡೆಸಲಾಯಿತು. ಅರ್ಚಕ ಸಂದೀಪ್‌ ನೇತೃತ್ವದ ವೈದಿಕರ ತಂಡ ಕುಡಿಕೆಗೆ ಸಂಚಯನಾದಿ ಕೈಂಕರ್ಯ ನೆರವೇರಿಸಿತು.

ADVERTISEMENT

ಪೊಲೀಸ್‌ ಭದ್ರತೆ: ಸ್ವಾಮೀಜಿಗೆ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಿದರು. ತುಮಕೂರು ಮಾರ್ಗವಾಗಿ ಬಂದ ಅವರನ್ನು ಶುಕ್ರವಾರ ರಾತ್ರಿ ನಾಗಮಂಗಲ ಪೊಲೀಸರು ಕರೆತಂದರು. ನಾಗಮಂಗಲ ಪ್ರವಾಸಿ ಮಂದಿರದಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅವರು ಪ್ರವಾಸಿ ಮಂದಿರದಲ್ಲಿ ಮಲಗಿದ್ದಾಗ ಚಿತಾಭಸ್ಮದ ಕುಡಿಕೆಯನ್ನು ಅಪ್ಪಿ ಮಲಗಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಎನ್‌ಕೌಂಟರ್‌ ಮಾಡಿ: ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್‌ ಮುತಾಲಿಕ್‌, ‘ಕೊಲೆಗಾರರನ್ನು ಎನ್‌ಕೌಂಟರ್‌ ಮಾಡಬೇಕು ಎಂದು ಗೃಹ ಸಚಿವರನ್ನು ಒತ್ತಾಯಿಸಲಾಗಿದೆ. ಇಡೀ ರಾಜ್ಯದ ಜನರಿಗೆ ಹರ್ಷನ ಸಾವಿನ ಕೋಪವಿದೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳುವುದಿಲ್ಲ. ಕೊಲೆಗಾರರ ಸಾವಿನ ನಂತರವಷ್ಟೇ ಆತನ ಆತ್ಮಕ್ಕೆ ಶಾಂತಿ ದೊರೆಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.