ADVERTISEMENT

ಪಾರ್ಕ್‌ನಲ್ಲಿ ಬಿದಿರು ಮರಗಳ ಹನನ

ಪಾಂಡವಪುರ: ಅಧಿಕಾರಿಗಳ ಮೌನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 10:38 IST
Last Updated 30 ಅಕ್ಟೋಬರ್ 2020, 10:38 IST
ಪಾಂಡವಪುರ ಪಾರ್ಕಿನಲ್ಲಿ ಗುರುವಾರ ಬಿದಿರು ಮರಗಳನ್ನು ಅಕ್ರಮವಾಗಿ ಕಡಿದು ಹಾಕಿರುವುದು(ಎಡಚಿತ್ರ) ಪಾರ್ಕಿನಿಂದ ಬಿದಿರು ಮರಗಳನ್ನು ಸಾಗಿಸುತ್ತಿರುವುದು
ಪಾಂಡವಪುರ ಪಾರ್ಕಿನಲ್ಲಿ ಗುರುವಾರ ಬಿದಿರು ಮರಗಳನ್ನು ಅಕ್ರಮವಾಗಿ ಕಡಿದು ಹಾಕಿರುವುದು(ಎಡಚಿತ್ರ) ಪಾರ್ಕಿನಿಂದ ಬಿದಿರು ಮರಗಳನ್ನು ಸಾಗಿಸುತ್ತಿರುವುದು   

ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣದ ಬಳಿ ಇರುವ ಉದ್ಯಾನದಲ್ಲಿ ಬಿದಿರು ಮರಗಳ ಹನನ ಎಗ್ಗಿಲ್ಲದೆ ಮುಂದುವರಿದಿದ್ದು, ಕೆಲವು ಅಪರಿಚಿತರು ಮರಗಳನ್ನು ಅಕ್ರಮವಾಗಿ ಕಡಿದು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ.

ಗುರುವಾರವೂ ಕೆಲವು ಅಪರಿಚಿತರು ಒಂದಿಷ್ಟು ಬಿದಿರು ಮರಗಳನ್ನು ಅಕ್ರಮವಾಗಿ ಕಡಿದು ಬೇರೆಡೆಗೆ ಸಾಗಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಸುಳಿಯಲಿಲ್ಲ. ಮರ ಕಡಿಯುತ್ತಿದ್ದ ಅಪರಿಚಿತರು ತಮ್ಮ ಪರಿಚಯವನ್ನು ಹೇಳಿಕೊಳ್ಳಲು ತಡವರಿಸಿ, ‘ಪುರಸಭೆಯವರು ಮರ ಕಡಿಯಲು ಹೇಳಿರುವುದರಿಂದ ಕಡಿಯುತ್ತಿದ್ದೇವೆ’ ಎಂದರು.

ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ನೋಡಿಕೊಂಡು ವಾಪಸ್ಸಾದರೆ ಹೊರತು, ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಹೀಗಾಗಿ ಬಿದಿರು ಮರಗಳ ಹನನ ಮತ್ತು ಸಾಗಾಣಿಕೆ ಮುಂದುವರಿಯಿತು.

ADVERTISEMENT

‘ಉದ್ಯಾನ ವಿ.ಸಿ.ನಾಲೆಯ ನೀರಾವರಿ ಇಲಾಖೆಗೆ ಒಳಪಟ್ಟಿ‌ದ್ದು, ಪುರಸಭೆ ನಿರ್ವಹಣೆಯ ಹೊಣೆ ಹೊತ್ತಿದೆ. ನಾವು ಬಿದಿರು ಮರಗಳ ಕಡಿಯಬೇಕು ಎಂದು ಯಾರಿಗೂ ಸೂಚಿಸಿಲ್ಲ’ ಎಂದು ನೀರಾವರಿ ಇಲಾಖೆಯ ಎಇಇ ಜಯರಾಮಯ್ಯ ತಿಳಿಸಿದರು.

‘ಪಾರ್ಕ್‌ ಸ್ವಚ್ಛ ಮಾಡುವುದು ಮಾತ್ರ ನಮ್ಮ ಹೊಣೆ. ಮರ ಕಡಿಯಲು ನಾವು ಹೇಳಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಹೇಳಿದರು.

ಆಗಸ್ಟ್‌ 28ರಂದು ಈ ಉದ್ಯಾನದಲ್ಲಿ ಅಕ್ರಮವಾಗಿ ಬಿದಿರು ಮರಗಳನ್ನು ಕಡಿದು ಟ್ರ್ಯಾಕ್ಟರ್ ಮೂಲಕ ಹೊರಗೆ ಸಾಗಿಸಲಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ವರದಿ ಮಾಡಿತ್ತು. ಈಗ ಮತ್ತೆ ಅಕ್ರಮ ಮರ ಕಡಿದು ಸಾಗಿಸುವುದು ಎಗ್ಗಿಲ್ಲದೆ ನಡೆಯುತ್ತಿದೆ.

‘ಪಟ್ಟಣದ ಉದ್ಯಾನದಲ್ಲಿ ಬಿದಿರು ಮರಗಳನ್ನು ಅಕ್ರಮವಾಗಿ ಕಡಿದು ಹೊರ ಸಾಗಿಸುವ ಕೆಲಸ ಪದೇ ಪದೇ ನಡೆಯುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮೌನವಹಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಮರಗಳ್ಳರ ಮೇಲೆ ಕಟ್ಟುನಿಟ್ಟಿನ ಕ್ರಮವಹಿಸಬೇಕು’ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.