ಮಂಡ್ಯ: ರಾಜರ ಆಡಳಿತ ಏನೆಂಬುದನ್ನು ತಿಳಿಯಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗೆಗಿನ ಕೃತಿಯನ್ನು ಒಮ್ಮೆ ಓದಿಕೊಂಡರೆ ಅರ್ಥವಾಗುತ್ತದೆ. ಅದನ್ನು ಪ್ರಸ್ತುತ ರಾಜಕಾರಣಿಗಳು ಅಳವಡಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಬಿಜೆಪಿ ಮುಖಂಡ ಎಚ್.ಆರ್. ಅರವಿಂದ ಅಭಿಪ್ರಾಯಪಟ್ಟರು.
ನಗರದ ಸೇವಾಕಿರಣ ಸಭಾಂಗಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆವತಿಯಿಂದ ಭಾನುವಾರ ನಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಅಂಕವೀರ ಪುರಸ್ಕಾರ’ ಹಾಗೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಬೆಂಗಳೂರನ್ನು ಮಾದರಿಯಾನ್ನಾಗಿ ಮಾಡಿ ನಾಡಪ್ರಭು ಕೆಂಪೇಗೌಡ ಅವರು ಉದಾಹರಣೆಯಾಗುತ್ತಾರೆ. ಮಂಡ್ಯ ಜಿಲ್ಲೆಯ ಕೆ.ವಿ.ಶಂಕರಗೌಡ ಅವರು ಸಹ ನಾಲ್ವಡಿ, ಕೆಂಪೇಗೌಡ ಹಾಗೂ ಬಸವಣ್ಣನವರ ಚಿಂತನೆಗಳಲ್ಲಿಯೇ ಸಾಗಿದ್ದರು. ಹಾಗಾಗಿ ಅವರು ಪ್ರಭಾವಿ ರಾಜಕಾರಣಿಯಾಗಿ ಹೊರಹೊಮ್ಮಿದ್ದರು’ ಎಂದು ಶ್ಲಾಘಿಸಿದರು.
‘ವಿದ್ಯಾರ್ಥಿಗಳಾದವರು ಮಹಾನ್ ನಾಯಕರ ಬಗ್ಗೆ ತಿಳಿದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ತಮ್ಮ ಭವಿಷ್ಯಕ್ಕೆ ದಾರಿ ಮಾಡಿಕೊಳ್ಳಬೇಕು. ಇಷ್ಟಪಟ್ಟು ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಅಭಿಪ್ರಾಯ ಪಟ್ಟರು.
ವಕೀಲ ಎಂ.ಗುರುಪ್ರಸಾದ್ ಮಾತನಾಡಿ, ಸಮಾಜ ನಮಗೆನು ಕೊಡುತ್ತಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರೂ ಮನನ ಮಾಡಿಕೊಂಡು ಅದರ ಋಣ ತೀರಿಸಬೇಕು. ಪರಿಸರ ಕಾಳಜಿ, ಗುರು ಹಿರಿಯರನ್ನು ಗೌರವಿಸುವ ಮನೋಭಾವ ವಿದ್ಯಾರ್ಥಿ ದಿಸೆಯಲ್ಲಿಯೇ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ಅಂಕವೀರ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸೇವಾಕಿರಣ ವೃದ್ಧಾಶ್ರಮದ ಕಾರ್ಯದರ್ಶಿ ಜಿ.ವಿ. ನಾಗರಾಜು, ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಪೋತೇರ ಮಹದೇವು, ಡಾ.ಎಚ್.ಸಿ. ಆನಂದ್, ಡಾ. ಮನೋಹರ್, ಕಲಾವಿದರಾದ ಕೀಲಾರ ವೀರಪ್ಪ, ಮಂಜುಳಾ, ಸುಧಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.