ಪಾಂಡವಪುರ: ಸಮಾಜದ ಎಲ್ಲಾ ವರ್ಗಗಳಿಗೆ ತಮ್ಮದೇ ಆದ ಹಕ್ಕುಗಳನ್ನು ನೀಡಿ ನೆಮ್ಮದಿಯಿಂದ ಬದುಕಲು ಅಂಬೇಡ್ಕರ್ ಅವರು ಸಂವಿಧಾನವನ್ನು ನೀಡಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಪ್ರೊ. ಡಿ.ಆನಂದ್ ಹೇಳಿದರು.
ಕರ್ನಾಟಕ ವಿದ್ಯುತ್‌ಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಮಿತಿ (466)ಯಿಂದ ಪಟ್ಟಣದ ಸೆಸ್ಕ್ ವಿಭಾಗೀಯ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಅಂಬೇಡ್ಕರ್ ಅವರು ಬದುಕಿದ್ದ 65 ವರ್ಷಗಳಲ್ಲಿ 35 ವರ್ಷ ಸುದೀರ್ಘ ಅಧ್ಯಯನ ನಡೆಸಿದರು. 30 ವರ್ಷಗಳ ಕಾಲ ಚಿಂತನೆಯ ಕನಸನ್ನು ಬಿತ್ತಿದರು. ಜಗತ್ತಿಗೆ ಮಾದರಿಯಾದ ಸಂವಿಧಾನವನ್ನು ನೀಡಿದರಲ್ಲದೆ, ಹಸಿವು, ಅಸ್ಪ್ಯಶ್ಯತೆ, ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿದರು’ ಎಂದು ಹೇಳಿದರು.
‘ದೇಶದಲ್ಲಿ ಅಂಬೇಡ್ಕರ್ ಚಿಂತನೆ ಹೋರಾಟಗಳನ್ನು ಅರ್ಥ ಮಾಡಿಕೊಳ್ಳದೇ ಅವರನ್ನು ಒಂದು ಜಾತಿಯ ನಾಯಕ ಎಂದು ಹಣೆಪಟ್ಟಿ ಕಟ್ಟಿದರು’ ಎಂದು ಬೇಸರ ವ್ಯಕ್ತಪಡಿಸಿದರು.
ಸೆಸ್ಕ್ ಇಲಾಖೆ ನೌಕರರ ಮಂಡ್ಯ ವೃತ್ತದ ಸಂಘಟನಾ ಕಾರ್ಯದರ್ಶಿ ಎಚ್.ಕೆ. ಅರುಣೇಶ್ ಉದ್ಫಾಟಿಸಿದರು. ಸೆಸ್ಕ್ ಇಇ ವೈ.ಆರ್. ವಿನುತಾ ಅಧ್ಯಕ್ಷತೆ ವಹಿಸಿದ್ದರು. ಎಇಇ ಕೆ.ರವಿಕುಮಾರ್, ಹೆಚ್ಚುವರಿ ಎಇಇ ಪ್ರಶಾಂತ್ ಕುಮಾರ್, ಜೆಇ ಎಂ.ಬಿ. ಚಲುವರಾಜು, ಲೆಕ್ಕಾಧಿಕಾರಿ ಕುಮಾರ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್.ಕೃಷ್ಣೇಗೌಡ, ಪತ್ರಕರ್ತ ಕುಮಾರಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.