ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯ ವಿಶ್ವವಿಖ್ಯಾತ ಬೃಂದಾವನ ಉದ್ಯಾನವನ್ನು ‘ಸಾರ್ವಜನಿಕ ಖಾಸಗಿ ಸಹಭಾಗಿತ್ವ’ದಲ್ಲಿ ₹2,663 ಕೋಟಿ ವೆಚ್ಚದಲ್ಲಿ ವಿಶ್ವದರ್ಜೆಗೆ ಉನ್ನತೀಕರಿಸಲು ಪ್ರಕ್ರಿಯೆ ಆರಂಭವಾಗಿದೆ.
198 ಎಕರೆ ಪ್ರದೇಶದಲ್ಲಿ ‘ಬೃಂದಾವನ ಮನರಂಜನಾ ಪಾರ್ಕ್’ ನಿರ್ಮಾಣಕ್ಕೆ ಸಂಬಂಧಿಸಿ ರಾಜಸ್ಥಾನದ ಸಿನ್ಸಿಯರ್ ಆರ್ಕಿಟೆಕ್ಟ್ ಎಂಜಿನಿಯರ್ ಸಂಸ್ಥೆಯು ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್) ತಯಾರಿಸಿ, ಕಾವೇರಿ ನೀರಾವರಿ ನಿಗಮಕ್ಕೆ ಸಲ್ಲಿಸಿದೆ.
ಈ ವರದಿಗೆ ರಾಜ್ಯ ಮಟ್ಟದ ‘ಸಿಂಗಲ್ ವಿಂಡೋ ಏಜೆನ್ಸಿ’ (ಎಸ್.ಡಬ್ಲ್ಯು.ಎ)ಯಿಂದ ಮತ್ತು ರಾಜ್ಯ ಮಟ್ಟದ ‘ಎಕ್ಸ್‌ಪರ್ಟ್ ಅಪ್ರೈಸಲ್ ಕಮಿಟಿ’ (ಎಸ್.ಇ.ಎ.ಸಿ)ಯಿಂದ ನಿರಾಕ್ಷೇಪಣಾ ಪತ್ರ ಪಡೆಯಲಾಗಿದೆ. ಸರ್ಕಾರದ ಸಚಿವ ಸಂಪುಟ ಸಮಿತಿಯ ಒಪ್ಪಿಗೆಗಾಗಿ ಆರ್ಥಿಕ ಇಲಾಖೆಗೆ ವರದಿಯನ್ನು ಸಲ್ಲಿಸಲಾಗಿದೆ.
ಏನೇನು ಇರಲಿದೆ?
ಪಾರ್ಕ್‌ನಲ್ಲಿ ಕಾವೇರಿ ಮಾತೆಯ ಮೂರ್ತಿ, ವಾಟರ್ ಪಾರ್ಕ್, ಪೆಂಗ್ವಿನ್ ಪಾರ್ಕ್, ವಾಟರ್ ಪ್ಲೇನ್ ರೈಡ್, ರೋಲರ್ ಕೋಸ್ಟರ್, ಹಾಟ್ ಏರ್ ಬಲೂನ್ ರೈಡ್, ಪ್ಯಾರಾಸೈಲಿಂಗ್, ಅರೋಮ ಗಾರ್ಡನ್, ಬೊಟಾನಿಕಲ್ ಗಾರ್ಡನ್, ಜಂಗಲ್ ಬೋಟ್ ರೈಡ್, ಸ್ಕೈ ವಾಕ್, ವ್ಯಾಕ್ಸ್ ಮ್ಯೂಸಿಯಂ, ಫುಡ್ ಪ್ಲಾಜಾ ಮತ್ತು ಬಹುಹಂತದ ಕಾರು ಪಾರ್ಕಿಂಗ್ ನಿರ್ಮಿಸಲು ಯೋಜಿಸಲಾಗಿದೆ.
ಒಂದು ಜಿಲ್ಲೆ ಒಂದು ತಾಣ:
‘ಒಂದು ಜಿಲ್ಲೆ ಒಂದು ತಾಣ’ ಯೋಜನೆಯಡಿ, ಜಿಲ್ಲೆಯ ಕೃಷ್ಣರಾಜಸಾಗರ ಆಯ್ಕೆಯಾಗಿತ್ತು. ರಾಜ್ಯ ಪ್ರವಾಸೋದ್ಯಮ ನೀತಿ–2020ರಲ್ಲಿ ಉದ್ಯಾನ ಅಭಿವೃದ್ಧಿಪಡಿಸಲು ಗುರುತಿಸಲಾಗಿತ್ತು. ಈ ಎಲ್ಲ ಕಾರಣಗಳಿಂದ ಉದ್ಯಾನಕ್ಕೆ ಹೊಸ ರೂಪ ನೀಡಲು ನಿಗಮ ಮುಂದಾಗಿದೆ.
ಜಾಗ ಖರೀದಿ:
‘1932ರಲ್ಲಿ ಸ್ಥಾಪನೆಯಾಗಿ, 60 ಎಕರೆಯಲ್ಲಿ ಹರಡಿರುವ ಉದ್ಯಾನದ ಅಭಿವೃದ್ಧಿ ಜತೆಗೆ ‘ಮನರಂಜನಾ ಪಾರ್ಕ್’ ನಿರ್ಮಿಸಲು ಒಟ್ಟು 198 ಎಕರೆ ಪ್ರದೇಶ ಬೇಕು. ಇಲ್ಲಿಗೆ ಸುಮಾರು 10 ಸಾವಿರ ಪ್ರವಾಸಿಗರು ಬರುವ ನಿರೀಕ್ಷೆಯಿದ್ದು, ಹೋಟೆಲ್, ಲಾಡ್ಜ್, ವಾಹನ ಪಾರ್ಕಿಂಗ್ ನಿರ್ಮಿಸಬೇಕು. ಅವಶ್ಯವಿರುವೆಡೆ ಜಾಗ ಖರೀದಿಗೆ ಚಿಂತನೆ ನಡೆದಿದೆ. ಪ್ರವಾಸಿಗರನ್ನು ಆಕರ್ಷಿಸಲು ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗುವುದು’ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಬೃಂದಾವನ ಉದ್ಯಾನಕ್ಕೆ ಹೊಸರೂಪ ನೀಡಲು ತಾಂತ್ರಿಕ ವರದಿ ಪಡೆಯಲಾಗಿದೆ. ಬೃಂದಾವನ ಅಮ್ಯೂಸ್‌ಮೆಂಟ್ ಪಾರ್ಕ್‌ನಿಂದ 8 ರಿಂದ 10 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ
– ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.