ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕೋಡಿಶೆಟ್ಟಿಪುರ ಮತ್ತು ಸಿದ್ದಾಪುರ ದಾಖ್ಲೆ ಗ್ರಾಮಗಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ತಂಗುದಾಣ ಮಂಜೂರಾಗಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎರಡು ಗ್ರಾಮಗಳ ಜನರಿಗೆ ಅನುಕೂಲ ಆಗುವಂತೆ ಹೆದ್ದಾರಿ ತಂಗುದಾಣಗಳನ್ನು ಮಂಜೂರು ಮಾಡಿದ್ದಾರೆ.
‘ಬೆಂಗಳೂರು– ಮೈಸೂರು ಹೆದ್ದಾರಿ–275ರಲ್ಲಿ ಹೆಚ್ಚುವರಿ ರಸ್ತೆ ಸುರಕ್ಷತಾ ಕಾಮಗಾರಿಯಡಿ ಬಸ್ ತಂಗುದಾಣಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆ, ಅನುಕೂಲಕ್ಕಾಗಿ ತಂಗುದಾಣಗಳನ್ನು ಮಂಜೂರು ಮಾಡಲಾಗಿದೆ. ಸ್ವಕ್ಷೇತ್ರದ ಅಭಿವೃದ್ಧಿಗೆ ನೀವು ಹೊಂದಿರುವ ಕಳಕಳಿಗೆ ಅಭಿನಂದನೆಗಳು’ ಎಂದು ನಿತಿನ್ ಗಡ್ಕರಿ ಅವರು ಕುಮಾರಸ್ವಾಮಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಕೋಡಿಶೆಟ್ಟಿಪುರ ಮತ್ತು ಸಿದ್ದಾಪುರ ದಾಖ್ಲೆ ಗ್ರಾಮಗಳ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಬಸ್ ತಂಗುದಾಣಗಳ ಮಂಜೂರಾತಿ ಕೋರಿ ಸೆ.19ರಂದು ಗಡ್ಕರಿ ಅವರಿಗೆ ಕುಮಾರಸ್ವಾಮಿ ಪತ್ರ ಬರೆದಿದ್ದರು.
‘ಆದಷ್ಟು ಬೇಗ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದಿರುವ ಗಡ್ಕರಿ ಅವರು, ‘ಹೆದ್ದಾರಿ ವ್ಯಾಪ್ತಿಯಲ್ಲಿ ಜನತೆಗೆ ಉತ್ತಮವಾದ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದ್ದಾರೆ.
‘ಇನ್ನೊಂದೆಡೆ ಹೆದ್ದಾರಿ ಸುರಕ್ಷತೆ ಹಾಗೂ ಅಪಘಾತಗಳನ್ನು ಶೂನ್ಯ ಮಟ್ಟಕ್ಕೆ ಇಳಿಸಲು ಕೇಂದ್ರ ಸಾರಿಗೆ, ಹೆದ್ದಾರಿ ಇಲಾಖೆ ನಿರಂತರ ಪ್ರಯತ್ನ ಮಾಡುತ್ತಿದೆ. ಆ ಉದ್ದೇಶದಿಂದಲೇ ಹೆದ್ದಾರಿ ಆಸುಪಾಸಿನಲ್ಲಿ ಅಗತ್ಯ ಇರುವ ಕಡೆ ಬಸ್ ತಂಗುದಾಣ ನಿರ್ಮಾಣ ಮಾಡಲಾಗುವುದು’ ಎಂದು ಗಡ್ಕರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.