ADVERTISEMENT

ರಂಗನತಿಟ್ಟು ಪಕ್ಷಿಧಾಮದಲ್ಲಿ ₹30ಲಕ್ಷ ವೆಚ್ಚದಲ್ಲಿ ಚಿಟ್ಟೆ ಪಾರ್ಕ್: ಸಚಿವ ಖಂಡ್ರೆ

ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮ: ಸಚಿವ ಈಶ್ವರ ಖಂಡ್ರೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 13:40 IST
Last Updated 11 ಮಾರ್ಚ್ 2025, 13:40 IST
ಶ್ರೀರಂಗಪಟ್ಟಣ ಸಮೀಪದ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ಉದ್ಯಾನ (ಸಾಂದರ್ಭಿಕ ಚಿತ್ರ) 
ಶ್ರೀರಂಗಪಟ್ಟಣ ಸಮೀಪದ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ಉದ್ಯಾನ (ಸಾಂದರ್ಭಿಕ ಚಿತ್ರ)    

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಅಂದಾಜು ₹ 30 ಲಕ್ಷ ವೆಚ್ಚದಲ್ಲಿ ‘ಚಿಟ್ಟೆ ಪಾರ್ಕ್’ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.

ಶಾಸಕ ಮಧು ಜಿ.ಮಾದೇಗೌಡ ಅವರು ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನಿರ್ಮಿಸಿರುವ ‘ಚಿಟ್ಟೆ ಪಾರ್ಕ್’ಗೆ ಫೆಬ್ರುವರಿ ತಿಂಗಳಲ್ಲಿ ವಲಯ ಅರಣ್ಯಾಧಿಕಾರಿಗಳು, ವನ್ಯಜೀವಿ ವಲಯ ಮೈಸೂರು ಹಾಗೂ ಸಿಬ್ಬಂದಿ ಜೊತೆ ಕ್ಷೇತ್ರ ತಪಾಸಣೆ ಮಾಡಿ ಅಲ್ಲಿನ ಚಿಟ್ಟೆ ಪಾರ್ಕಿನ ಮಾದರಿಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಪಡೆದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

‘ಚಿಟ್ಟೆ ಪಾರ್ಕ್’ನಲ್ಲಿ ಚಿಟ್ಟೆಗಳ ಸಂತಾನೋತ್ಪತ್ತಿಗಾಗಿ (ಬ್ರೀಡಿಂಗ್‌ ಸೆಂಟರ್‌) 1,500 ಚದರ ಅಡಿ ಹಾಗೂ ಸಾರ್ವಜನಿಕ ವೀಕ್ಷಣೆಗಾಗಿ ಪ್ರದರ್ಶನ ಪ್ರದೇಶ ಸುಮಾರು 5,000 ಚದರ ಅಡಿ ಪ್ರದೇಶವನ್ನು ಮೀಸಲಿಡಲು ಉದ್ದೇಶಿಸಲಾಗಿದೆ. 2025-26ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅಳಡಿಸಿಕೊಂಡು ₹30 ಲಕ್ಷ  ಅಂದಾಜು ವೆಚ್ಚದಲ್ಲಿ ‘ಚಿಟ್ಟೆ ಪಾರ್ಕ್’ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

ಚಿಟ್ಟೆಗಳ ಪ್ರಭೇದಗಳು

ರಂಗನತಿಟ್ಟು ಪಕ್ಷಿಧಾಮದಲ್ಲಿ ಲೈಮ್‌ ಬಟರ್‌ಫ್ಲೈ, ಕ್ರಿಮ್‌ಸನ್‌ ರೋಸ್‌, ದಕ್ಷಿಣ ಪಕ್ಷಿಗಳ ವಿಂಗ್‌, ಕಾಮನ್‌ ರೋಸ್‌, ಬ್ಲೂ ಟೈಗರ್‌, ಮಾಟಲ್‌ ಎಮಿಗ್ರೆಂಟ್‌, ಯೆಲ್ಲೋ ಪ್ಯಾನ್ಸಿ, ರೆಡ್‌ ಪಿಯರ್‌ ರಾಟ್‌, ಪಯೋನಿರ್‌ ಮತ್ತು ಟೈಲ್ಡ್‌ ಜೇ ಸೇರಿದಂತೆ ವಿವಿಧ ಜಾತಿಯ ಆಕರ್ಷಕ, ಅಪರೂಪದ ಚಿಟ್ಟೆಗಳನ್ನು ಗುರುತಿಸಲಾಗಿದೆ ಎಂದು ವಿವರಿಸಿದ್ದಾರೆ.

ಅಲ್ಲದೆ, ಚಿಟ್ಟೆಗಳ ಆಹಾರಕ್ಕಾಗಿ ನಿಂಬೆ ಕಿತ್ತಳೆ, ಈಶ್ವರ ಬಳ್ಳಿ, ಕಾಡು ಹಾಲೆ ಬಳ್ಳಿ, ಸೀಮೆ ತಂಗಡಿ, ಕಾಡು ಬಸಳೆ, ಕಲ್ಲುರಕಿ, ಕಾಡು ಕತ್ತರಿ, ಅಶೋಕ ಮರ, ಸಂಪಿಗೆ ವಿವಿಧ ಸಸ್ಯಗಳನ್ನು ಬೆಳಸಲಾಗಿದೆ. ಗಿಡಗಳು ಸಿಗದ ಸಮಯದಲ್ಲಿ ಕೃತಕವಾಗಿ ಹಣ್ಣು ಹಂಪಲುಗಳನ್ನು ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

  • 1,500 ಚ.ಅಡಿಯಲ್ಲಿ ಬ್ರೀಡಿಂಗ್‌ ಸೆಂಟರ್‌ ಚಿಟ್ಟೆಗಳ ಆಹಾರಕ್ಕಾಗಿ ವಿವಿಧ ಸಸಿಗಳ ಪೋಷಣೆ 

  • ಅಪರೂಪದ ಚಿಟ್ಟೆಗಳ ಗುರುತು

ಹಿಡಕಲ್‌ ಡ್ಯಾಂನಲ್ಲೂ ಚಿಟ್ಟೆ ಪಾರ್ಕ್‌!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಡ್ಯಾಂನಲ್ಲಿ ಚಿಟ್ಟೆ ಪಾರ್ಕ್‌ ಅನ್ನು 2023–24ರಲ್ಲಿ ನಿರ್ಮಿಸಲಾಗಿದೆ. 2 ಹೆಕ್ಟೇರ್‌ ವಿಸ್ತೀರ್ಣ ಹೊಂದಿದ್ದು 39 ಚಿಟ್ಟೆ ಪ್ರಭೇದಗಳು ಇಲ್ಲಿ ಕಂಡುಬಂದಿವೆ.  ಬೆಂಗಳೂರು ನಗರ ಜಿಲ್ಲೆಯ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 4.86 ಹೆಕ್ಟೇರ್‌ ಪ್ರದೇಶದಲ್ಲಿ ಚಿಟ್ಟೆ ಉದ್ಯಾನ ಅಭಿವೃದ್ಧಿಪಡಿಸಿ 2007ರಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ವಿವಿಧ ಋತುಗಳಲ್ಲಿ ಕಂಡುಬರುವ ಸುಮಾರು 14ಕ್ಕಿಂತಲೂ ಹೆಚ್ಚು ಪ್ರಭೇದದ ಚಿಟ್ಟೆಗಳ ಸಂತಾನೋತ್ಪತ್ತಿಗೆ ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.