ಮಂಡ್ಯ: ‘ದುಡಿಯುವ ಜನರ ಹಕ್ಕುಗಳನ್ನು ಬಂಡವಾಳಶಾಹಿಗಳು ಕಸಿದುಕೊಂಡಿದ್ದು, ಅವರ ನ್ಯಾಯಯುತ ಬೇಡಿಕೆಗಳು ಸಮರ್ಪಕವಾಗಿ ನೀಡುವುದು ಮುಖ್ಯವಾಗಬೇಕು’ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿ.ಕುಮಾರಿ ಒತ್ತಾಯಿಸಿದರು.
ನಗರದ ಗುರುಮಠದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕಚೇರಿ ಆವರಣದಲ್ಲಿ ಮಂಡ್ಯ ಸಂಚಾಲನಾ ಸಮಿತಿಯಿಂದ ಮೇ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಾರ್ಮಿಕ ವರ್ಗದ ಮುಷ್ಕರದಲ್ಲಿ ಅವರು ಮಾತನಾಡಿದರು.
‘1886ರಲ್ಲಿ ಅಮೆರಿಕದ ಷಿಕಾಗೋದಲ್ಲಿ ನಡೆದ ಹೋರಾಟದಲ್ಲಿ ಹಲವು ಕಾರ್ಮಿಕ ಮುಂಖಡರು ಸಾವನ್ನಪ್ಪಿದರು. ಅವರ ರಕ್ತ ಚೆಲ್ಲಿದ ಬಣ್ಣದ ಕುರುಹಾಗಿ ಕೆಂಪು ಬಣ್ಣದ ಬಾವುಟವನ್ನೇ ಚಿಹ್ನೆಯಾಗಿ ಬಳಸಲಾಗುತ್ತಿದೆ. ನಮ್ಮ ಕಾರ್ಮಿಕರ ಸಮಸ್ಯೆ ಈಡೇರಿಸುವುದು ನಮ್ಮ ಸಂಘಟನೆಯ ಮೂಲ ಉದ್ದೇಶವಾಗಿದ್ದು, ಅದರಂತೆ ಹೋರಾಟ ರೂಪಿಸಿಕೊಂಡು ಸರ್ಕಾರವನ್ನು ಎಚ್ಚೆತ್ತುಕೊಳ್ಳುವ ಕೆಲಸ ಮಾಡುತ್ತಿದ್ದೇವೆ’ ಎಂದರು.
‘ನಮ್ಮ ದುಡಿಮೆಯ ಹಕ್ಕನ್ನು ಪಡೆದುಕೊಳ್ಳಬೇಕು. ಆಳುವ ವರ್ಗವು ದುಡಿಯುವ ಜನರ ಪರವಾಗಿಲ್ಲ. ಕೇವಲ ಬಂಡವಾಳಶಾಹಿಗಳು ಕಾರ್ಮಿಕರನ್ನು ಹಿಡಿತದಲ್ಲಿಟ್ಟುಕೊಂಡಿವೆ. ಇವರಿಂದ ಮುಕ್ತಿಗೊಳಿಸಬೇಕಿದೆ. ಅದರಂತೆ ಮೇ 20ರಂದು ದೇಶವ್ಯಾಪಿ ಬಂದ್ ಮಾಡುವ ನಿಟ್ಟಿನಲ್ಲಿ ಹೋರಾಟ ಮಾಡಲಾಗುತ್ತಿದೆ. ಕಾರ್ಮಿಕ ನೀತಿ ರದ್ದಾಗಬೇಕು. ಮಸೂದೆಗಳು ವಾಪಸ್ ಆಗಬೇಕು. ರೈತ ವಿರೋಧಿ ವಿದ್ಯುತ್ ಮಸೂದೆ ಹಿಂಪಡೆಯುವ ಜೊತೆಗೆ ಮೀಟರ್ ಅಳವಡಿಕೆ ನಿಲ್ಲಿಸಬೇಕು ಎಂಬ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ‘ಮೇ ದಿನಾಚರಣೆಯು ಕಾರ್ಮಿಕ ವರ್ಗದ ಹಬ್ಬವಾಗಿದೆ. ಇದನ್ನು ಹಬ್ಬದ ರೀತಿ ದುಡಿಯುವ ವರ್ಗ ಆಚರಿಸಬೇಕು. ಹಿಂದೂಗಳಿಗಾದರೆ ಯುಗಾದಿ, ದೀಪಾವಳಿ, ಮುಸಲ್ಮಾನರಿಗಾದರೆ ರಂಜಾನ್, ಬಕ್ರೀದ್, ಕ್ರೈಸ್ತರಿಗಾದರೆ ಕ್ರಿಸ್‌ಮಸ್ ಇದೆ. ಆದರೆ, ಎಲ್ಲ ಜಾತಿ ಧರ್ಮದ ದುಡಿಯುವ ಜನರಿಗೆ ಮೇ ದಿನಾಚರಣೆಯು ಸಂಭ್ರಮದ ಹಬ್ಬವಾಗಿದೆ’ ಎಂದು ಹೇಳಿದರು.
ಸಿಐಟಿಯುನ ಸಂಚಾಲಕ ಚಂದ್ರಶೇಖರಮೂರ್ತಿ, ಬಿಸಿಯೂಟ ಜಿಲ್ಲಾ ಕಾರ್ಯದರ್ಶಿ ಎ.ಬಿ.ಶಶಿಕಲಾ, ಪುಟ್ಟಮ್ಮ, ಎಂ.ಲಕ್ಷ್ಮಿ, ಅಂಗನವಾಡಿ ನೌಕರರ ಸಂಘದ ಗಾಯತ್ರಿ, ಮಂಗಳಾ, ಜಯಲಕ್ಷ್ಮಿ, ಉದ್ಯೋಗ ಖಾತ್ರಿ ಕಾರ್ಮಿಕರಾದ ಪ್ರೇಮಾ, ರೇಣುಕಾ, ಸುಷ್ಮಾ, ಔಷಧಿ ವ್ಯಾಪಾರ ಪ್ರತಿನಿಧಿಗಳ ಸಂಘದ ಎನ್.ರವೀಂದ್ರ, ಗಾರ್ಮೆಂಟ್ಸ್ ಯೂನಿಯನ್ ಮಮತಾ, ಆಟೊ ಯೂನಿಯನ್ ಸಂಘದ ಕೃಷ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.