
ಪ್ರಜಾವಾಣಿ ವಾರ್ತೆ
ಬೆಳಕವಾಡಿ: ಸಮೀಪದ ಮಳವಳ್ಳಿ- ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ 209 ರಸ್ತೆಯ ಗಗನಚುಕ್ಕಿ ಟೋಲ್ ಬಳಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐದು ಮಂದಿ ಗಾಯಗೊಂಡು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರುಗಳು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರು ಬೆಂಗಳೂರಿನ ಮೂಲದವರು ಎಂದು ತಿಳಿದು ಬಂದಿದೆ. ಅದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಸ್ಥಳೀಯರ ನೆರವಿನಿಂದ ಕಾರು ಅಪಘಾತದಲ್ಲಿ ನರಳಾಡುತ್ತಿದ್ದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿ ಕೊಟ್ಟು ಮಾನವಿಯತೆ ಮೆರೆದಿದ್ದಾರೆ. ಪ್ರಕರಣ ದಾಖಲಾಗಿಲ್ಲ.