ADVERTISEMENT

ಒಳಮೀಸಲಾತಿ: ದತ್ತಾಂಶ ಸಂಗ್ರಹ ಮೇ 5ರಿಂದ

ಮಾಹಿತಿ ದಾಖಲಿಸಲು ಆ್ಯಪ್‌ ಬಳಕೆ: ನಿಖರ ಮಾಹಿತಿ ನೀಡಿ– ಜಿಲ್ಲಾಧಿಕಾರಿ ಕುಮಾರ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:43 IST
Last Updated 3 ಮೇ 2025, 14:43 IST
ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪರಿಶಿಷ್ಟ ಜಾತಿ ಮುಖಂಡರ ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ ಮಾತನಾಡಿದರು. ಸಿಇಒ ಕೆ.ಆರ್‌.ನಂದಿನಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್‌ ಹಾಜರಿದ್ದರು 
ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪರಿಶಿಷ್ಟ ಜಾತಿ ಮುಖಂಡರ ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ ಮಾತನಾಡಿದರು. ಸಿಇಒ ಕೆ.ಆರ್‌.ನಂದಿನಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್‌ ಹಾಜರಿದ್ದರು    

ಮಂಡ್ಯ: ‘ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನ್‌ ದಾಸ್ ಏಕಸದಸ್ಯ ವಿಚಾರಣ ಆಯೋಗದಿಂದ ದತ್ತಾಂಶ ಶೇಖರಿಸುವ ಸಮೀಕ್ಷೆಯು ಜಿಲ್ಲೆಯಲ್ಲಿ ಮೇ 5ರಿಂದ 17ರವೆರೆಗೆ ನಡೆಸಲಾಗುವುದು. ಪರಿಶಿಷ್ಟ ಜಾತಿ ಸಮುದಾಯ ಹಾಗೂ ವಿವಿಧ ಸಂಘ ಸಂಸ್ಥೆಯ ಮುಖಂಡರು ಸಮೀಕ್ಷೆಯ ಬಗ್ಗೆ ಪರಿಶಿಷ್ಟ ಜಾತಿಯ ಕುಟುಂಬದವರಿಗೆ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪರಿಶಿಷ್ಟ ಜಾತಿ ಮುಖಂಡರ ಸಭೆ ನಡೆಸಿ ಮಾತನಾಡಿದರು. ಗಣತಿದಾರರಾಗಿ ಶಾಲಾ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಸಮೀಕ್ಷೆಯನ್ನು ಆ್ಯಪ್‌ನಲ್ಲಿ ಭರ್ತಿ ಮಾಡಲಾಗುವುದು ಎಂದರು.

ಸಮೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ವಿವರ ನೀಡಿದರು. ಸಮೀಕ್ಷೆದಾರರು ಕೇಳುವ ಪ್ರಶ್ನೆಗಳಿಗೆ ನಿಖರ ಮಾಹಿತಿ ನೀಡುವಂತೆ ಪರಿಶಿಷ್ಟ ಜಾತಿಯ ಕುಟುಂಬಸ್ಥರಿಗೆ ಜಾಗೃತಿ ಮೂಡಿಸುವಂತೆ ಮುಖಂಡರಲ್ಲಿ ಮನವಿ ಮಾಡಿದರು.

ADVERTISEMENT

10 ಗಣತಿದಾರರಿಗೆ ಒಬ್ಬ ಸೂಪರ್‌ವೈಸರ್‌ ನೇಮಕ ಮಾಡಲಾಗಿದೆ ಹಾಗೂ ಅವರಿಗೆ ತರಬೇತಿ ನೀಡಲಾಗಿದೆ. ಆ್ಯಪ್‌ನಲ್ಲಿ ಭರ್ತಿ ಮಾಡಬೇಕಿರುವುದರಿಂದ ತರಬೇತಿಗೆ ಹೆಚ್ಚು ಒತ್ತು‌ ನೀಡಲಾಗಿದೆ ಎಂದರು.

‌ಆನ್‌ಲೈನ್‌ ಮೂಲಕವೂ ಅವಕಾಶ: ಮೇ 19ರಿಂದ 21ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವುದು. ಕಾರಣಾಂತರಗಳಿಗೆ ಮನೆ-ಮನೆ ಸಮೀಕ್ಷೆಯ ಸಂದರ್ಭದಲ್ಲಿ ಸಮೀಕ್ಷೆಗೆ ಒಳಗಾಗದವರು‌ ತಮ್ಮ‌ ವ್ಯಾಪ್ತಿಯ ಮತಗಟ್ಟೆಗೆ ಭೇಟಿ ನೀಡಿ ಸಮೀಕ್ಷೆಗೆ ಒಳಗಾಗುವುದು‌. ಇದಲ್ಲದೇ ಮೇ 19ರಿಂದ 23ರವರೆಗೆ ಆನ್‌ಲೈನ್ ಮೂಲಕ ಸ್ವಯಂ-ಘೋಷಣೆಗೆ ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಮಾತನಾಡಿ, ‘ಸಮೀಕ್ಷೆಯಲ್ಲಿ ಗಣತಿದಾರರು ತಾಂತ್ರಿಕವಾಗಿ‌ ಹೆಚ್ಚಿನ ಜ್ಞಾನ ಹೊಂದಿರಬೇಕು ಎಂಬ ದೃಷ್ಟಿಯಿಂದ ತರಬೇತಿ ನೀಡಲಾಗಿದೆ’ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಕಸ ಸಂಗ್ರಹಿಸುವ ವಾಹನದ ಧ್ವನಿವರ್ಧಕದ ಮೂಲಕ ಹೆಚ್ವಿನ‌ ಪ್ರಚಾರ ನೀಡಿ, ನಗರ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಕುಟುಂಬದವರು‌‌ ಸಮೀಕ್ಷೆಗೆ ಒಳಗಾಗಲು ಹಿಂಜರಿಯುತ್ತಾರೆ‌. ಸಮೀಕ್ಷೆಗೆ ಆನ್‌ಲೈನ್‌ನಲ್ಲೂ ಅವಕಾಶ ಇದೆ ಎಂಬುದರ ಬಗ್ಗೆ ಪ್ರಚಾರ ನೀಡಿ. ಸಮೀಕ್ಷೆಗೆ ಸಮೀಕ್ಷೆದಾರರು ಬೆಳಿಗ್ಗೆ 7 ಗಂಟೆಗೆ ಹೋಗುವುದು ಉತ್ತಮ ಇದರಿಂದ ಕೆಲಸಕ್ಕೆ ತೆರಳುವವರಿಗೆ ಅನುಕೂಲವಾಗುತ್ತದೆ. ಪೌರಕಾರ್ಮಿಕರು, ಅಲೆಮಾರಿಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರಿಕೆ‌ ವಹಿಸಿ ಎಂದು ಸಭೆಗೆ ಸಲಹೆ ನೀಡಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ‌ ಉಪನಿರ್ದೇಶಕ ಸಿದ್ದಲಿಂಗೇಶ್ ಮತ್ತು ಮುಖಂಡರು ಭಾಗವಹಿಸಿದ್ದರು.

ಸಮೀಕ್ಷೆದಾರರಿಗೆ ತರಬೇತಿ

ಪರಿಶಿಷ್ಟ ಜಾತಿಗಳ ದತ್ತಾಂಶ ಸ್ವೀಕರಿಸುವ ಸಮೀಕ್ಷೆಗಾಗಿ ಆಯ್ಕೆಯಾಗಿರುವ ಸಮೀಕ್ಷೆದಾರರಿಗಾಗಿ ಮತ್ತು ಮೇಲ್ವಿಚಾರಕರಿಗಾಗಿ ಪಿ.ಇ.ಎಸ್ ಕಾಲೇಜಿನಲ್ಲಿ ಒಂದು ದಿನದ ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು. ಜಿಲ್ಲೆಯಿಂದ ಒಟ್ಟು 410 ಗಣತಿದಾರರನ್ನು ಸಮೀಕ್ಷೆಗಾಗಿ ಆಯ್ಕೆ ಮಾಡಿದ್ದು ತರಬೇತಿಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ ಭಾಗವಹಿಸಿ ಸಮೀಕ್ಷೆ ಸಂದರ್ಭದಲ್ಲಿ ಆ್ಯಪ್ ಅನ್ನು ಯಾವ ರೀತಿ ಬಳಸಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.