ADVERTISEMENT

ಮನಮುಟ್ಟುವ ಚಲುವರಾಜನ ಗಾಯನ

ಕಾಲೇಜು ಹಂತದಿಂದ ರಾಷ್ಟ್ರಮಟ್ಟದವರೆಗೆ ಸಾಧನೆ ಮಾಡಿದ ಶಿಕ್ಷಕ; ವಿವಿಧೆಡೆ ಗಾನಸುಧೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:37 IST
Last Updated 14 ಮೇ 2019, 20:37 IST
ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಶಿಕ್ಷಕ ಚಲುವರಾಜು ಜನಪದ ಗೀತೆ ಗಾಯನ ನೀಡಿದರು (ಎಡದಿಂದ ನಾಲ್ಕನೆಯವರು)
ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಶಿಕ್ಷಕ ಚಲುವರಾಜು ಜನಪದ ಗೀತೆ ಗಾಯನ ನೀಡಿದರು (ಎಡದಿಂದ ನಾಲ್ಕನೆಯವರು)   

ಕೆರಗೋಡು: ಜನಪದ ಗೀತೆ, ಭಾವಗೀತೆ, ಹಾಗೂ ವಚನಗಳಿಗೆ ಜೀವ ತುಂಬಿ ಹಾಡುವ, ಕಂಚಿನ ಕಂಠದ ಚಲುವರಾಜು ಈ ಭಾಗದ ಜನರ ಮನಸೂರೆಗೊಂಡಿದ್ದಾರೆ. ಮಂಡ್ಯ ತಾಲ್ಲೂಕಿನ ವಿ.ಸಿ. ಫಾರಂನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಅವರು ರಾಜ್ಯದ ವಿವಿಧೆಡೆ ಗಾನಸುಧೆ ಹರಿಸಿದ್ದಾರೆ.

ಬಾಲ್ಯದಲ್ಲಿ ಅಜ್ಜಿ ಹಾಡುತ್ತಿದ್ದ ಸೋಬಾನೆ ಪದಗಳ ವೈಖರಿಗೆ ಮಾರುಹೋಗಿದ್ದ ಚಲುವರಾಜು, ಪ್ರೌಢಶಾಲೆ ಹಂತದಿಂದಲೇ ತಾನೂ ಹಾಡಲು ಆರಂಭಿಸಿದರು. ಇವರು ಹಾಡುತ್ತಿದ್ದ ಮೋಡಿಗೆ ಶಿಕ್ಷಕರು, ಸಹಪಾಠಿಗಳೂ ಪ್ರೋತ್ಸಾಹಿಸಿದರು. ಶಾಲಾ ಹಂತದಲ್ಲಿಯೇ ಹಲವು ಬಹುಮಾನಗಳನ್ನು ದಕ್ಕಿಸಿಕೊಂಡರು. ಕಾಲೇಜಿಗೆ ಸೇರಿದಾಗಲೂ ಹಾಡು ಮುಂದುವರಿಸಿದರು.

ಎನ್‌ಎಸ್‌ಎಸ್‌ ಶಿಬಿರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಜೀರ ನುಡಿಸುತ್ತಾ ಪ್ರೇಕ್ಷಕರ ಮನ ಮುಟ್ಟುತ್ತಿದ್ದರು.

ADVERTISEMENT

ಚಲುವರಾಜು ಪ್ರತಿಭೆ ಕಂಡ ಉಪನ್ಯಾಸಕರು ಅಂತರ ಕಾಲೇಜು, ಅಂತರ ವಿಶ್ವವಿದ್ಯಾಲಯಗಳ ಸ್ಪರ್ಧೆಗಳಲ್ಲಿ ಭಾಗವಹಿಸಲು ಉತ್ತೇಜಿಸಿದರು. ಶಿಕ್ಷಕರಿಗೆ ನಿರಾಸೆ ಮಾಡದ ಇವರು ಪದಕಗಳನ್ನು ತಮ್ಮ ಜೋಳಿಗೆಗೆ ಇರಿಸಿಕೊಂಡರು. ಜಿಲ್ಲೆ, ರಾಜ್ಯಕ್ಕೆ ಮಾತ್ರ ಸೀಮಿತವಾಗದ ಇವರ ಹಾಡುಗಾರಿಕೆ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ದಕ್ಷಿಣ ವಲಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ಕೀರ್ತಿ ತಂದರು. ಜಾರ್ಖಂಡ್‌ನ ರಾಂಚಿ ಬಳಿಯ ಮಿಶ್ರಾದಲ್ಲಿ ನಡೆದ ರಾಷ್ಟ್ರಮಟ್ಟದ ಅಂತರ ಕಾಲೇಜು ಸ್ಪರ್ಧೆಯಲ್ಲಿ ಭಾಗವಹಿಸಿ
ಸ್ಥಳೀಯ ಜನಪದ ಸೊಗಡು ಹಂಚಿದರು.

1998ರಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ನೇಮಕವಾದ ನಂತರ ಶಿಕ್ಷಕರಿಗಾಗಿ ನಡೆಯುವ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದರು. ಈಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ, ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಆಕಾಶವಾಣಿಯ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಸವಿಗಾನ ಉಣಬಡಿಸಿದ್ದಾರೆ. ಪ್ರಸ್ತುತ ಕನ್ನಡ ಭಾಷಾ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ತಾಲ್ಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೂ ತರಬೇತಿ ನೀಡುತ್ತಿದ್ದಾರೆ.

ಇವರ ಸಾಧನೆಗೆ ಬೆಂಗಳೂರಿನ ರಾಜ್ಯಮಟ್ಟದ ಬಾಪೂಜಿ ಸೇವಾರತ್ನ ಪ್ರಶಸ್ತಿ, ಜಿಲ್ಲಾ ಕಸಾಪ ಶಿಕ್ಷಕ ಪ್ರಶಸ್ತಿ, ಲಯನ್ಸ್ ಸಂಸ್ಥೆ ಉತ್ತಮ ಶಿಕ್ಷಕ ಪ್ರಶಸ್ತಿಗಳು ಲಭಿಸಿದ್ದು, ಹಲವು ಸಂಘ ಸಂಸ್ಥೆಗಳು ಗೌರವಿಸಿವೆ.

‘ಬೋಧನೆಯಲ್ಲಿ ಗಾಯನ ಅಳವಡಿಸಿಕೊಳ್ಳಲಿ’

‘ಗಾಯನ ಕಲೆ ವ್ಯಕ್ತಿಯ ಮಾನಸಿಕ ಸಮತೋಲನ ವೃದ್ಧಿಗೆ ಸಹಕಾರಿಯಾಗಿದೆ. ಶಿಕ್ಷಕರು ಬೋಧನೆಯಲ್ಲಿ ಗಾಯನ ಅಳವಡಿಸಿಕೊಂಡರೆ ಕಲಿಕೆ ಆಸಕ್ತಿದಾಯಕವಾಗುತ್ತದೆ. ಜೊತೆಗೆ ಸುಲಭ ಕಲಿಕೆಯಿಂದ ಮಕ್ಕಳಿಗೆ ಜ್ಞಾನ ತುಂಬಬಹುದು. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರ ಸಂಘಟನೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೀಡಿದ ಸಹಕಾರ ನನ್ನ ಸಾಧನೆಗೆ ಪ್ರೋತ್ಸಾಹವಾಗಿದೆ’ ಎಂದು ಶಿಕ್ಷಕ ಚಲುವರಾಜು ಹೇಳಿದರು.

ಹಾಡಿನ ರೂಪದಲ್ಲಿ ಕನ್ನಡ ವ್ಯಾಕರಣ

ಸ್ಥಳೀಯವಾಗಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಕನ್ನಡ ವ್ಯಾಕರಣದ ಸಂಧಿ, ಸಮಾಸ, ಛಂದಸ್ಸು, ಅಲಂಕಾರಗಳನ್ನು ಹಾಡಿನ ರೂಪದಲ್ಲಿ ಹೇಳಿಕೊಡುತ್ತಾರೆ. ಈ ಮೂಲಕ ಸುಲಭವಾಗಿ ವ್ಯಾಕರಣ ಅರ್ಥೈಸುತ್ತಾರೆ. ಪರೀಕ್ಷಾ ದೃಷ್ಟಿಯಿಂದ ಸ್ಥಳೀಯ ದೃಶ್ಯ ಮಾಧ್ಯಮಗಳಲ್ಲಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸುಲಭ ವ್ಯಾಕರಣ ತರಗತಿ ನಡೆಸಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.