ಮಂಡ್ಯ: ‘ಯಾವ ಲಂಚದ ಹಣವನ್ನೂ ಮುಟ್ಟದ ಸತ್ಯಹರಿಶ್ಚಂದ್ರ ಇದ್ದರೆ ಅದು ನಮ್ಮ ಕುಮಾರಸ್ವಾಮಿ ಮಾತ್ರ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಡುವುದೆಲ್ಲವೂ ಗಂಭೀರ ಆರೋಪವೇ. ಆದರೆ, ಅವರು ಬಾಯಿ ಚಪಲಕ್ಕೆ ಮಾತನಾಡುತ್ತಾರಷ್ಟೆ’ ಎಂದು ದೂರಿದರು.
‘ರಾಜ್ಯದಲ್ಲಿ ಮೂರು ಕ್ಷೇತ್ರದ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಗೆದ್ದಿತು. ಆಗಲೂ ಬಾಯಿ ಚಪಲಕ್ಕೆ ಹೇಳಿಕೆ ನೀಡಿದ್ದರು. ಒಬ್ಬ ಮಾಜಿ ಮುಖ್ಯಮಂತ್ರಿ ಅಥವಾ ಕೇಂದ್ರ ಸಚಿವ ಮಾತನಾಡುತ್ತಾರೆಂದರೆ, ಅದಕ್ಕೆ ಉತ್ತರಿಸಲು ನೂರು ಬಾರಿ ಯೋಚನೆ ಮಾಡುವಂತಿರಬೇಕು. ಆದರೆ, ಇವರು ಮಾತಿನ ಶೂರತ್ವ ತೋರುತ್ತಿದ್ದಾರೆ’ ಎಂದು ಟೀಕಿಸಿದರು.
‘ಸತ್ಯಹರಿಶ್ಚಂದ್ರ ಹೋದ ಮೇಲೆ ಲಂಚ ಮುಟ್ಟದೆ ಇರುವವರು, ಬೇರೆಯವರಿಂದ ಹಣ ತೆಗೆದುಕೊಳ್ಳದೇ ಇರುವವರು, ಯಾವುದೇ ಸಹಾಯ ಪಡೆಯದೇ ಇರುವವರು ಈ ಭೂಮಿ ಮೇಲಿದ್ದರೆ ಅವರು ಕುಮಾರಸ್ವಾಮಿ ಒಬ್ಬರೆ ಎನ್ನುವುದನ್ನು ನಾವು–ನೀವೆಲ್ಲ ಒಪ್ಪಿಕೊಳ್ಳಬೇಕಿದೆ’ ಎಂದರು.
‘ನನಗೆ ರಾಜ್ಯ ಸರ್ಕಾರ ಶಿಷ್ಟಾಚಾರದ ಪ್ರಕಾರ ಕಾರನ್ನು ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ನಾನು ಲೋಕಸಭಾ ಸದಸ್ಯನಾಗಿದ್ದ ಸಂದರ್ಭದಲ್ಲಿ ಅಂಬರೀಷ್ ಅವರು ಬಳಸುತ್ತಿದ್ದ ಕಾರನ್ನೇ ಒಂದು ವರ್ಷ ಬಳಸಿದ್ದೆ. ಈಗ ಮಂತ್ರಿಯಾಗಿರುವೆ, ಹಿಂದಿನ ಸರ್ಕಾರದಲ್ಲಿ ಉಪಯೋಗಿಸುತ್ತಿದ್ದ ಕಾರನ್ನೇ ಎಲ್ಲ ಮಂತ್ರಿಗಳೂ ಆರು ತಿಂಗಳು ಬಳಸಿದ್ದೆವು. ಯಾವುದೇ ಕಾರನ್ನು ಬದಲಾವಣೆ ಮಾಡಬೇಕೆಂದರೆ ಇಷ್ಟು ಕಿ.ಲೋ.ಮೀಟರ್ ಓಡಿಸಬೇಕೆನ್ನುವ ನಿಯಮವಿದೆ. ಅದನ್ನು ಪಾಲಿಸಬೇಕಲ್ಲವೇ? ಅದನ್ನ ಬಿಟ್ಟು ಮಾಧ್ಯಮದ ಮುಂದೆ ಬಂದು ಸರ್ಕಾರ ನನಗೆ ಕಾರ್ ಕೊಟ್ಟಿಲ್ಲ ಎನ್ನುವುದು ಸರಿಯಲ್ಲ. ಹಿಂದಿನ ಸಂಸದೆ ಸುಮಲತಾ ಅವರು ಉಪಯೋಗಿಸುತ್ತಿದ್ದ ಕಾರನ್ನು ಬಳಸಲ್ಲ ಎಂದರೆ ಹೇಗೆ?’ ಎಂದು ಕೇಳಿದರು.
‘ಹೆದ್ದಾರಿಗಳ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಹಿಂದಿನಿಂದಲೂ ಬೇಡಿಕೆ ಇತ್ತು. ಅದರಂತೆ ಈಗ ಅನುದಾನ ಬಿಡುಗಡೆ ಆಗುತ್ತಿದೆ. ಅದನ್ನೇ ನಾನು ವಿಶೇಷ ಯೋಜನೆಯಡಿ ತಂದೆ ಎಂದು ಕುಮಾರಸ್ವಾಮಿ ಹೇಳುತ್ತಾರೆ’ ಎಂದು ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.