ADVERTISEMENT

ಕಣ್ಮನ ಸೆಳೆದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ತೆಪ್ಪೋತ್ಸವ

ಪಂಚಕಲ್ಯಾಣಿಗೆ ಹೈಟೆಕ್‌ ವಿದ್ಯುತ್‌ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 5:18 IST
Last Updated 6 ಏಪ್ರಿಲ್ 2023, 5:18 IST
ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವದ ಅಂಗವಾಗಿ ಪಂಚಕಲ್ಯಾಣಿಯಲ್ಲಿ ವಿದ್ಯುತ್ ದೀಪಗಳ ಅಲಂಕಾರದ ಮಧ್ಯೆ ಚೆಲುವನಾರಾಯಣ ಸ್ವಾಮಿ ತೆಪ್ಪೋತ್ಸವ ನಡೆಯಿತು
ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವದ ಅಂಗವಾಗಿ ಪಂಚಕಲ್ಯಾಣಿಯಲ್ಲಿ ವಿದ್ಯುತ್ ದೀಪಗಳ ಅಲಂಕಾರದ ಮಧ್ಯೆ ಚೆಲುವನಾರಾಯಣ ಸ್ವಾಮಿ ತೆಪ್ಪೋತ್ಸವ ನಡೆಯಿತು   

ಮೇಲುಕೋಟೆ: ವೈರಮುಡಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಇಲ್ಲಿನ ಪಂಚಕಲ್ಯಾಣಿಯಲ್ಲಿ ವಿದ್ಯುತ್ ದೀಪಗಳ ಅಲಂಕಾರದ ಮಧ್ಯೆ ಚೆಲುವನಾರಾಯಣ ಸ್ವಾಮಿಯ ತೆಪ್ಪೋತ್ಸವ ಸಂಭ್ರಮದಿಂದ ನಡೆಯಿತು.

ಉತ್ತರ ನಕ್ಷತ್ರದ 8ನೇ ತಿರುನಾಳ್‌ನಲ್ಲಿ ತೆಪ್ಪೋತ್ಸವ ನಡೆಯಿತು. ಬಳಿಕ ಚೆಲುವನಾರಾಯಣ ಸ್ವಾಮಿಯ ಉತ್ಸವ ದೇವಾಲಯಕ್ಕೆ ಮರಳಿತು.

ಸಂಜೆ ದೇವಾಲಯದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದಿಂದ ಪಂಚಕಲ್ಯಾಣಿವರೆಗೂ ಮೆರವಣಿಗೆ ನಡೆಯಿತು. ಮಂಗಳವಾದ್ಯ, ಗೋಷ್ಠಿಯೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ADVERTISEMENT

ಚೆಲುವನಾರಾಯಣ ಸ್ವಾಮಿ ತೆಪ್ಪೋತ್ಸವ ಕಲ್ಯಾಣಿಯಲ್ಲಿ ಮೂರು ಪ್ರದಕ್ಷಿಣೆ ಹಾಕಿತು. ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯುವ ವೇಳೆ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಭಕ್ತರು ಗೋವಿಂದ ನಾಮ ಸ್ಮರಣೆ ಮಾಡಿದರು.

ಭಕ್ತರ ಬೇಸರ: ಮೈಸೂರು ಅರಸರ ಆಳ್ವಿಕೆಯಲ್ಲಿ ಪಂಚಕಲ್ಯಾಣಿಯಲ್ಲಿ ತೆಪ್ಪೋತ್ಸವದ ವೇಳೆ ಕಲ್ಯಾಣಿಯ ಮೆಟ್ಟಿಲಗಳ ಮೇಲೆ ಮಣ್ಣಿನ ದೀಪ ಇಟ್ಟು ಬೆಳಗಿಸಲಾಗುತ್ತಿತ್ತು. ಇದನ್ನು ನೋಡಲು ಲಕ್ಷಾಂತರ ಭಕ್ತರು ಬರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದನ್ನು ಕೈಬಿಟ್ಟಿರುವುದಕ್ಕೆ ಭಕ್ತರು ಬೇಸರ ವ್ಯಕ್ತಪಡಿಸಿದರು.

ಲೇಸರ್ ಶೋ: ವೈರಮುಡಿ ಬ್ರಹ್ಮೋತ್ಸವದ ನಿಮಿತ್ತ ಮೇಲುಕೋಟೆಯಲ್ಲಿ ₹49 ಲಕ್ಷ ವೆಚ್ಚದಲ್ಲಿ ಮೈಸೂರು ದಸರಾ ಮಾದರಿಯಲ್ಲಿ ಹೈಟೆಕ್ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಪಂಚಕಲ್ಯಾಣಿಯಲ್ಲಿ ಆಯೋಜಿಸಿದ್ದ ಮೇಲುಕೋಟೆ ಇತಿಹಾಸ ಪರಿಚಯಿಸುವ ಲೇಸರ್ ಶೋ ಗಮನ ಸೆಳೆಯಿತು.

ಜಿಲ್ಲಾಧಿಕಾರಿ ಎಚ್‌.ಎನ್‌.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ತಹಶೀಲ್ದಾರ್ ಸೌಮ್ಯ, ದೇವಾಲಯದ ಸಿಇಒ ಮಹದೇವು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.