ADVERTISEMENT

ಮಂಡ್ಯ: ರಸ್ತೆ ದುರಸ್ತಿ, ಮಾರುಕಟ್ಟೆ, ಮೇಲ್ಸೇತುವೆ...

ನಗರಸಭೆ ಬಜೆಟ್‌ ಪೂರ್ವಭಾವಿ ಸಭೆ; ವಿವಿಧ ಸಂಘಟನೆ ಮುಖಂಡರಿಂದ ಸಲಹೆ, ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 12:52 IST
Last Updated 6 ಜನವರಿ 2022, 12:52 IST
ನಗರಸಭೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಯಿಂದ ಬಂದಿದ್ದ ಎನ್‌.ಡಿ.ಹರಿಪ್ರಸಾದ್‌ ಮಾತನಾಡಿದರು
ನಗರಸಭೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಯಿಂದ ಬಂದಿದ್ದ ಎನ್‌.ಡಿ.ಹರಿಪ್ರಸಾದ್‌ ಮಾತನಾಡಿದರು   

ಮಂಡ್ಯ: ಗುಂಡಿ ಬಿದ್ದ ರಸ್ತೆಗಳಿಂದ ವಾಹನ ಸಂಚಾರಕ್ಕೆ ಸಂಚಾಕಾರ, ಇಲ್ಲದ ಸುಸಜ್ಜಿತ ಮಾರುಕಟ್ಟೆ, ಸಾರ್ವಜನಿಕ ಕೆಲಸಗಳಿಗೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ, ಅಕ್ರಮ ಕಟ್ಟಡಗಳ ಹಾವಳಿ, ಮರೀಚಿಕೆಯಾದ ರಸ್ತೆ ವಿಸ್ತರಣೆ, ರೈಲ್ವೆ ಗೇಟ್‌ನಲ್ಲಿ ಜನ– ವಾಹನಗಳ ದಟ್ಟಣೆ...ಇವೇ ಮೊದಲಾದ ಸಮಸ್ಯೆಗಳು ಗುರುವಾರ ನಗರಸಭೆ ಕಚೇರಿಯಲ್ಲಿ ನಡೆದ ನಗರಸಭೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಚರ್ಚೆಗೆ ಬಂದವು.

ಕಾಂಗ್ರೆಸ್‌ ಮುಖಂಡ ಎಂ.ಎಸ್‌.ಆತ್ಮಾನಂದ ಮಾತನಾಡಿ ‘ಮಂಡ್ಯ ನಗರ ಇತ್ತ ಹಳ್ಳಿಯೂ ಅಲ್ಲ, ಅತ್ತ ನಗರವೂ ಅಲ್ಲ ಎಂಬಂತೆ ಜನರ ಅಪಹಾಸ್ಯಕ್ಕೆ ಈಡಾಗುತ್ತಿರುವುದನ್ನು ಇನ್ನಾದರೂ ತಪ್ಪಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ತಂದು ನಗರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕು. ಮಾರುಕಟ್ಟೆ ನಿರ್ಮಾಣಕ್ಕಾಗಿ ಈ ಹಿಂದೆ ₹ 3– 4 ಕೋಟಿ ಮೀಸಲಿಡಲಾಗಿತ್ತು. ಆದರೆ ಈಗ ಮಾರುಕಟ್ಟೆ ವೆಚ್ಚ ₹ 14.5 ಕೋಟಿ ದಾಟಿದೆ ಎಂಬ ಮಾಹಿತಿ ಇದೆ. ಯೋಜನೆ ಎಲ್ಲಿಯವರೆಗೆ ಬಂದದಿದೆ ಎಂಬ ಬಗ್ಗೆ ಚರ್ಚೆಯಾಗಬೇಕು’ ಎಂದರು.

‘ಮಾರುಕಟ್ಟೆ ಕಟ್ಟಲು ತೊಡಕುಗಳಿದ್ದರೆ ಪಕ್ಷಾತೀತವಾಗಿ ನಿಯೋಗ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ನಗರಕ್ಕೊಂದು ಸುಸಜ್ಜಿತ ತರಕಾರಿ ಮಾರುಕಟ್ಟೆ ಇಲ್ಲವಾಗಿದೆ. ರೈಲುಗಳ ಸಂಚಾರ ಹೆಚ್ಚಾಗಿದ್ದು ಮಹಾವೀರ ಸರ್ಕಲ್‌ ರೈಲ್ವೆ ಗೇಟ್‌ನಲ್ಲಿ ವಾಹನಗಳ ದಟ್ಟಣೆ ತೀವ್ರಗೊಳ್ಳುತ್ತಿದೆ. ಮೇಲ್ಸೇತುವೆ ನಿರ್ಮಾಣದ ಬೇಡಿಕೆ ಇನ್ನೂ ಈಡೇರಿಲ್ಲ’ ಎಂದರು.

‘ಎಲ್ಲೆಡೆ ರಸ್ತೆ ಹದಗೆಟ್ಟಿದ್ದು ವಾಹನಗಳು ಸಂಚರಿಸುವುದೇ ದುಸ್ತರವಾಗಿದೆ. ನಗರಸಭೆಯಿಂದ ಅನುದಾನ ಇಟ್ಟು ಕೆಲಸ ಮಾಡಬೇಕು. ಬೇಸಿಗೆ ಬರುತ್ತಿದ್ದು ತಕ್ಷಣ ಕಾರ್ಯೋನ್ಮುಖವಾಗಿ ಮಂಡ್ಯ ನಗರದಲ್ಲಿರುವ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಬೇಕು. ಅಗೆದ ರಸ್ತೆಗಳನ್ನು ಮುಚ್ಚಲು ನಗರಸಭೆ ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ’ ಎಂದರು.

ADVERTISEMENT

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಾಮಲಾಪುರ ಮಾತನಾಡಿ ‘ಶಂಕರ ನಗರದ ಸ್ಮಶಾನದಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಆಗುತ್ತಿದೆ, ಅಲ್ಲಿ ಮೃತದೇಹಗಳನ್ನು ಬೇಯಿಸುವಾಗ ವಾಸನೆ ಬರುತ್ತಿದೆ, ಅಲ್ಲಿ ಒಂದು ವಿದ್ಯತ್‌ ಚಿತಾಗಾರ ಸ್ಥಾಪನೆ ಆಗಬೇಕು. ಅದರಿಂದ ಪರಿಸರ ಮಾಲಿನ್ಯ ತಡೆಗೆ ಸಹಾಯಕವಾಗುತ್ತದೆ’ ಎಂದರು.

ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ ಮಾತನಾಡಿ ‘14ನೇ ವಾರ್ಡಿನಲ್ಲಿ ಪಿಎಚ್‌ಸಿ ನಿರ್ಮಾಣವಾಗಬೇಕು. ಕಲ್ಲಹಳ್ಳಿಯ ಸ್ಮಶಾನಕ್ಕೆ ವಿದ್ಯುತ್‌ ಚಿತಾಗಾರ ಬೇಕು, ನಗರದ ರಸ್ತೆಗಳಿಗೆ ದುರಸ್ತಿ ಮಾಡಿಸುವ ಕೆಲಸ ಆಗಬೇಕು. ಜನಗಣತಿ ಆಧಾರದ ಮೇಲೆ ಸ್ವಚ್ಛತೆ ಸೇರಿದಂತೆ ಇತರೆ ಕೆಲಸಗಳಿಗೆ ತೆಗೆದುಕೊಳ್ಳಲು ಒಂದು ನಿರ್ಧಾರ ಕೈಗೊಳ್ಳಬೇಕು’ ಎಂದರು.

ಪೌರಾಯುಕ್ತ ಲೊಕೇಶ್‌ ಮಾತನಾಡಿ ‘ಕೊಳೆಗೇರಿ ನಿವಾಸಿಗಳಿಗೆ ಸರ್ಕಾರಿ ಜಮೀನು ಇರಬಹುದು, ಸ್ಲಂಭೂಮಿ ಇರಬಹುದು, ಕೊಳಚೆ ನಿರ್ಮೂಲನಾ ಮಂಡಳಲಿಯಿಂದಲೇ ಹಕ್ಕುಪತ್ರ ನೀಡಲಾಗುವುದು. ಖಾಸಗಿ ಜಮೀನಿನಲ್ಲಿರುವ ಸ್ಲಂಗಳನ್ನ ಎಲ್ಲಿಗೆ ಸ್ಥಳಾಂತರಿಸುವ ಬಗ್ಗೆ ನಿರ್ಧಾರವಾಗಿದೆ. ಸ್ಲಂಬೋರ್ಡ್‌ ಮತ್ತು ನಗರಸಭೆಯಿಂದ ಹಕ್ಕುಪತ್ರ ಕೊಡುವ ಕೆಲಸ ಆಗಲಿದೆ’ ಎಂದರು.

ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು ಮಾತನಾಡಿ ‘ಆರೋಗ್ಯ ಇಲಾಖೆ ಜೊತೆ ಚರ್ಚೆ ನಡೆಸಿ ಕೋವಿಡ್, ಓಮೈಕ್ರಾನ್‌ ಸಂಬಂಧಿಸಿದಂತೆ ಯೋಜನೆಗಳನ್ನು ಆಯವ್ಯಯದಲ್ಲಿ ಸೇರಿಸಲಾಗುವುದು. ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸಲಾಗುವುದು. ಫುಟ್‌ಪಾತ್‌ ವಶಪಡಿಸಿಕೊಂಡವರು ತೆರವುಗೊಳಿಸಲು ಜ.10ರೊಳಗೆ ಗಡುವು ನೀಡಲಾಗುವುದು. ಜ.11ರನಂತರ ಫುಟ್‌ಬಾತ್‌ ತೆರವು ಕಾರ್ಯಾಚರಣೆ ಮಾಡಲಾಗುವುದು’ ಎಂದರು.

ಶಾಸಕ ಎಂ.ಶ್ರೀನಿವಾಸ್, ನಗರಸಭೆ ಉಪಾಧ್ಯಕ್ಷೆ ಇಷ್ರತ್‌ ಫಾತಿಮಾ ಭಾಗವಹಿಸಿದ್ದರು.

ಮುಡಾ– ನಗರಸಭೆ ನಡುವೆ ಸಮನ್ವಯವಿರಲಿ
‘ನಗರಸಭೆ ಮತ್ತು ಮುಡಾ ಎರಡು ಕಣ್ಣುಗಳಿಂದ್ದಂತೆ, ಎರಡೂ ಕಚೇರಿ ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಮನೆ ಕಟ್ಟಲು ಲೈಸೆನ್ಸ್‌ ಪಡೆಯಲು ಎರಡೂ ಕಚೇರಿಗಳಿಗೂ ಜನರು ಅಲೆದು ಹೈರಾಣಾಗುತ್ತಿದ್ದಾರೆ’ ಎಂದು ಎಂ.ಎಸ್‌.ಆತ್ಮಾನಂದ ಹೇಳಿದರು.

‘ಲಕ್ಷಾಂತರ ರೂಪಾಯಿ ಖರ್ಚು ಮಾಡುವ ವ್ಯಕ್ತಿಗಳು ಕೇವಲ ದಾಖಲಾತಿ ಖರ್ಚಿಗೆ ಹಣ ನೀಡುವುದಿಲ್ಲವೇ? ಕಾಲ ನಿಗದಿ ಮಾಡಿ ಆ ಸಮಯದಲ್ಲಿ ಸಾರ್ವಜನಿಕರ ಕೆಲಸಗಳು ಆಗಬೇಕು. ಮುಡಾ ವ್ಯಾಪ್ತಿಯಲ್ಲಿ ಪಾರ್ಕಿಂಗ್‌ ಕೂಡ ಬಿಡದೇ ಮಳಿಗೆಗಳನ್ನು ಕಟ್ಟಿಕೊಂಡು ತೊಂದರೆ ಕೊಡುತ್ತಿದ್ದಾರೆ. ಕಟ್ಟಡ ಕಟ್ಟುವ ಹಂತದಲ್ಲಿಯೇ ಅವರಿಗೆ ತಿಳಿ ಹೇಳಲು ಎರಡೂ ಕಚೇರಿ ಒಂದಾಗಿ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.