ADVERTISEMENT

ಸಿ.ಎಂ ಸಹಿ ನಕಲು ಮಾಡಿ ₹31 ಲಕ್ಷ ವಂಚನೆ: ಎಫ್‌ಐಆರ್‌

ಮಂಡ್ಯ ಪೂರ್ವ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 16:09 IST
Last Updated 20 ಫೆಬ್ರುವರಿ 2025, 16:09 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಹಿಯನ್ನು ನಕಲು ಮಾಡಿ, ನಕಲಿ ನೇಮಕಾತಿ ಆದೇಶ ಸೃಷ್ಟಿಸಿ ₹31 ಲಕ್ಷ ವಂಚಿಸಿದ ಆರೋಪದ ಮೇರೆಗೆ ತಾಲ್ಲೂಕಿನ ತಾವರೆಗೆರೆ ನಿವಾಸಿ ಎಚ್‌.ಸಿ.ವೆಂಕಟೇಶ್‌ ಎಂಬುವರ ವಿರುದ್ಧ ನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮಂಡ್ಯ ಗಾಂಧಿನಗರದ ನೇತ್ರಾವತಿ ಮತ್ತು ಕಲ್ಲಹಳ್ಳಿಯ ಮಲ್ಲೇಶ್‌ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ‘ಆರೋಪಿಯು ಬೆಂಗಳೂರಿನ ವಿಧಾನಸೌಧದಲ್ಲಿ ಉದ್ಯೋಗದಲ್ಲಿರುವುದಾಗಿ ನಂಬಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕೆಲಸ ಕೊಡಿಸುವುದಾಗಿ ಒಬ್ಬರಿಂದ ₹12.24 ಲಕ್ಷ ಮತ್ತು ವಾಣಿಜ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಿ ಕೆಲಸ ಕೊಡಿಸುವುದಾಗಿ ಇನ್ನೊಬ್ಬರಿಂದ ₹19 ಲಕ್ಷ ಪಡೆದು ವಂಚಿಸಿದ್ದಾನೆ’ ಎಂದು ದೂರಲಾಗಿದೆ. 

‘ಚಿತ್ರನಟ ದರ್ಶನ್‌ ಗೊತ್ತು, ಅವರೇ ನನಗೆ ಕಾರು ಕೊಟ್ಟಿದ್ದಾರೆ. ಸಚಿವ ಜಮೀರ್‌ ಅಹಮದ್‌ ಗೊತ್ತು ಎಂದು ಹಲವರನ್ನು ಯಾಮಾರಿಸಿದ್ದಾನೆ. ವಿಧಾನಸೌಧದಲ್ಲಿ ಸಚಿವರು, ಅಧಿಕಾರಿಗಳ ಕೊಠಡಿಗಳನ್ನು ತೋರಿಸಿ, ಸರ್ಕಾರಿ ಕಚೇರಿಗಳಿಗೆ ಕರೆಸಿ ವಂಚಿಸಿದ್ದಾನೆ’ ಎಂದು ಆರೋಪಿಸಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.