ಶ್ರೀರಂಗಪಟ್ಟಣ: ‘ಸರ್ಕಾರಿ ಶಾಲೆಗಳ ಪ್ರಗತಿಗೆ ಸಮುದಾಯದ ಸಹಕಾರ ಅಗತ್ಯ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ತಾಲ್ಲೂಕಿನ ಆಲದಹಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅರುಣೋದಯ ಕಲಾ ತಂಡದ ಸಹಯೋಗದಲ್ಲಿ ಗುರುವಾರ ನಡೆದ ಬುದ್ದ, ಬಸವ, ಅಂಬೇಡ್ಕರ್, ಸಾವಿತ್ರಿ ಬಾಯಿ ಫುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಮತ್ತು ಪರಿಸರ ದಿನಾಚರಣೆ ಹಾಗೂ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದವರು ಉನ್ನತ ಹುದ್ದೆಯಲ್ಲಿದ್ದಾರೆ. ಈಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಯತ್ತ ಆಕರ್ಷಿಸಲು ಶಿಕ್ಷಕರು ಪರಿಣಾಮಕಾರಿ ಕಾರ್ಯಕ್ರಮ ರೂಪಿಸಬೇಕು. ಮುಚ್ಚಿಹೋಗಿದ್ದ ಆಲದಹಳ್ಳಿ ಸರ್ಕಾರಿ ಶಾಲೆಯ ಪುನರಾರಂಭಕ್ಕೆ ರಂಗಭೂಮಿ ಕಲಾವಿದೆ ಮಂಜುಳಾ ಆಲದಹಳ್ಳಿ ಸಾಕಷ್ಟು ಶ್ರಮಪಟ್ಟಿದ್ದು, ಇತರರಿಗೆ ಮಾದರಿಯಾಗಿದ್ದಾರೆ’ ಎಂದು ಶ್ಲಾಘಿಸಿದರು.
ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ‘ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಶಿಕ್ಷಣ ಇಲಾಖೆ, ಶಾಲಾಭಿವೃದ್ಧಿ ಸಮಿತಿ ಹಾಗೂ ಸಂಘ, ಸಂಸ್ಥೆಗಳು ಆಸಕ್ತಿಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಅರುಣೋದಯ ಕಲಾ ತಂಡದ ಅಧ್ಯಕ್ಷೆ ಮಂಜುಳಾ ಆಲದಹಳ್ಳಿ, ‘ವಿದ್ಯಾರ್ಥಿಗಳು ಶಾಲೆಗೆ ಬರಲು ನಾಲೆಗೆ ಕಿರು ಸೇತುವೆ, ಗೇಟ್ ಮತ್ತು ಸುಸಜ್ಜಿತ ಶೌಚಾಲಯ ನಿರ್ಮಿಸಿಕೊಡಿ’ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
‘ಎಲ್ಲರೊಳಗೊಂದಾಗು’ ಸಂಘಟನೆಯ ವಿನಯ್‌ಕುಮಾರ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಲತಾ ಶಂಕರ್ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಲತಾರಾಣಿ, ಇಂದಿರಾಬಾಯಿ, ಸುಂದರೇಶಮೂರ್ತಿ, ವಿನೋದ, ನಿವೃತ್ತ ಯೋಧ ಮಂಜು, ಮಧು, ಹನುಮಂತು ಅವರನ್ನು ಸನ್ಮಾನಿಸಲಾಯಿತು.
ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹುರುಗಲವಾಡಿ ರಾಮಯ್ಯ, ಮುಖ್ಯ ಶಿಕ್ಷಕ ಎಚ್.ಆರ್. ರವಿಕುಮಾರ್, ಸಹ ಶಿಕ್ಷಕ ಬಿ.ವಿ. ತೇಜ, ಎಸ್‌ಡಿಎಂಸಿ ಅಧ್ಯಕ್ಷೆ ಚೈತ್ರ ನಾಗರಾಜ್, ಕೊಡಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ, ಸದಸ್ಯ ಶ್ರೀನಿವಾಸ್, ಪಿಡಿಒ ಮಹೇಶ್, ಹೊಸಕೆರೆ ರಘು, ಕಲಾವಿದರಾದ ವನಿತಾ ರಾಜೇಶ್, ರಾಚಯ್ಯ, ಹಿರಿಯ ವಿದ್ಯಾರ್ಥಿಗಳಾದ ಸಿದ್ದಾರ್ಥ, ಅನಿಲ್, ವಿಶ್ವಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.