ಪಾಂಡವಪುರ: ಅಂಬೇಡ್ಕರ್ ಅವರ ಸಂವಿಧಾನದ ಕುರಿತು ಭಾಷಣ ಮಾಡುವ ಕಾಂಗ್ರೆಸ್‌ನವರಿಗೆ ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಕಿಂಚಿತ್ತು ಗೌರವವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಆರೋಪಿಸಿದರು.
ತಾಲ್ಲೂಕಿನ ಕೆನ್ನಾಳು ಗೇಟ್ ಬಳಿ ಬಿಜೆಪಿಯಿಂದ ಭಾನುವಾರ ಆಯೋಜಿಸಿದ್ದ ದೇಶದ ತುರ್ತು ಪರಿಸ್ಥಿತಿ ಕರಾಳ ದಿನದ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್‌ನವರು ಸಂವಿಧಾನವನ್ನು 38ರಿಂದ 42ರವರೆಗೆ ತಿದ್ದುಪಡಿ ಪ್ರಜಾಪ್ರಭುತ್ವ ಮೂಲಭೂತ ಹಕ್ಕುಗಳನ್ನು ಕಗ್ಗೊಲೆ ಮಾಡಿದರು. 1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪರಿವಾರ ಸಂವಿಧಾನದ ಈ ತಿದ್ದುಪಡಿಯನ್ನು ವಾಪಸ್ ಪಡೆದು ಸಂವಿಧಾನದ ಘನತೆ ಉಳಿಸುವ ಕೆಲಸ ಮಾಡಿದರು. ಯುದ್ಧ, ಆಂತರಿಕ ಬಿಕ್ಕಟ್ಟು, ಆರ್ಥಿಕ ದಿವಾಳಿತನವಾದಾಗ ರಾಷ್ಟ್ರಪತಿಗಳು ತುರ್ತುಪರಿಸ್ಥಿತಿ ಜಾರಿಗೊಳಿಸಲು ಸಂವಿಧಾನದಲ್ಲಿ ಅವಕಾಶವಿದೆ, ಆದರೆ ಇಂದಿರಾಗಾಂಧಿ ಅವರು ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಿದರು’ ಎಂದು ಕಿಡಿಕಾರಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ‘ಸಂವಿಧಾನ ಹಾಗೂ ಅಂಬೇಡ್ಕರ್ ಅವರ ವಿರುದ್ದ ಕೆಲಸ ಮಾಡಿದ ಪಕ್ಷವೆಂದರೆ ಅದು ಕಾಂಗ್ರೆಸ್. ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಪಾಠ ಮಾಡುವ ಕಾಂಗ್ರೆಸ್‌ನವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಾರೆ. ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿ ಜೈಲಿಗೆ ಹೋಗಿದ್ದು, ಆರ್‌ಎಸ್ಎಸ್ ಮತ್ತು ಬಿಜೆಪಿ ಸಂಘಟನೆಗಳು ಎಂಬುದನ್ನು ಮರೆಯಬಾರದು’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಇಂದ್ರೇಶ್ ಮಾತನಾಡಿದರು. ಬಿಜೆಪಿ ಮುಖಂಡರಾದ ಪರಮಾನಂದ, ಮದ್ದೂರು ಸ್ವಾಮಿ, ಅಶೋಕ್ ಜಯರಾಮು, ಸಿದ್ದರಾಮಯ್ಯ, ಇಂಡುವಾಳು ಸಚ್ಚಿದಾನಂದ, ಮಂಗಳಾ ನವೀನ್‌ಕುಮಾರ್, ಜೆ.ಶಿವಲಿಂಗೇಗೌಡ, ನೀಲನಹಳ್ಳಿ ಧನಂಜಯ, ಕೆ.ಎಲ್.ಆನಂದ್, ಶ್ರೀಧರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.