ADVERTISEMENT

ಪೊಲೀಸರು– ವ್ಯಾಪಾರಿಗಳ ನಡುವೆ ವಾಗ್ವಾದ

ಸಿಐಟಿಯು ಮುಖಂಡನ ಬಂಧನ; ಬಿಡುಗಡೆಗೆ ಒತ್ತಾಯಿಸಿ ಡಿವೈಎಸ್ಪಿ ಕಚೇರಿ ಬಳಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 14:10 IST
Last Updated 28 ಜುಲೈ 2020, 14:10 IST
ಮಳವಳ್ಳಿ ಪಟ್ಟಣದ ಡಿವೈಎಸ್ಪಿ ಕಚೇರಿ ಮುಂಭಾಗ ಸಿಐಟಿಯು ಮುಖಂಡನ ಬಂಧನ ಖಂಡಿಸಿ ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು
ಮಳವಳ್ಳಿ ಪಟ್ಟಣದ ಡಿವೈಎಸ್ಪಿ ಕಚೇರಿ ಮುಂಭಾಗ ಸಿಐಟಿಯು ಮುಖಂಡನ ಬಂಧನ ಖಂಡಿಸಿ ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು   

ಮಳವಳ್ಳಿ: ಪಟ್ಟಣದ ಪೇಟೆಬೀದಿ ಬದಿಯ ಅಂಗಡಿಗಳ ತೆರವು ಕಾರ್ಯಾಚರಣೆ ವಿಚಾರದಲ್ಲಿ ಮಂಗಳವಾರ ಪೊಲೀಸರು ಹಾಗೂ ವ್ಯಾಪಾರಿಗಳ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಕಾರಣ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಕಳೆದ ಮೂರು ತಿಂಗಳ ಹಿಂದೆ ಬೀದಿ ಬದಿಯಲ್ಲಿ ಹಾಕಲಾಗಿದ್ದ ಅಂಗಡಿಗಳ ತೆರವುಗೊಳಿಸಲಾಗಿತ್ತು. ಈಚೆಗೆ ಪಟ್ಟಣದ ಪೊಲೀಸ್ ಕಾನ್‌ಸ್ಟೆಬಲ್‌ವೊಬ್ಬರಿಗೆ ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ಆ ಭಾಗವನ್ನು ಸೀಲ್‌ಡೌನ್‌ ಮಾಡಲಾಗಿತ್ತು. ತೆರವುಗೊಳಿಸಿದ ನಂತರವೂ ವ್ಯಾಪಾರಿಗಳು ಸೋಮವಾರದಿಂದ ಅಂಗಡಿ ಹಾಕಿಕೊಂಡಿದ್ದರು.

‘ಮಂಗಳವಾರವೂ ವ್ಯಾಪಾರ ಮುಂದುವರೆಸಿದ್ದ ಹಿನ್ನೆಲೆಯಲ್ಲಿ ಸಿಪಿಐ ಎ.ಕೆ.ರಾಜೇಶ್ ನೇತೃತ್ವದಲ್ಲಿ ಪೊಲೀಸರ ತಂಡವೊಂದು ಅಂಗಡಿ ತೆರವುಗೊಳಿಸಲು ಯತ್ನಿಸಿದರು. ಆಗ ವ್ಯಾಪಾರಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ವ್ಯಾಪಾರಿಗಳ ಪರ ಬಂದಿದ್ದ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ದೇವಿ ವ್ಯಾಪಾರ ನಿಲ್ಲಿಸುವುದಿಲ್ಲ’ ಎಂದು ಪಟ್ಟು ಹಿಡಿದರು.

ADVERTISEMENT

ಪುರಸಭೆಯ ಮುಖ್ಯಾಧಿಕಾರಿ ಸ್ಥಳಕ್ಕೆ ಬಂದು ಜಾಗ ಗುರುತು ಮಾಡುವವರೆಗೂ ಪೇಟೆಬೀದಿಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ತಕ್ಷಣವೇ ವ್ಯಾಪಾರ ನಿಲ್ಲಿಸಬೇಕು ಎಂದು ಸೂಚಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ತಳ್ಳಾಟ, ನೂಕಾಟ ನಡೆಯಿತು.

ಸಿಐಟಿಯು ಮುಖಂಡ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸಿಐಟಿಯು ಮುಖಂಡ ತಿಮ್ಮೇಗೌಡ ಅವರನ್ನು ಪೊಲೀಸರು ಬಂಧಿಸಿದರು.

‘ಪೇಟೆಬೀದಿ ಬದಿಯಲ್ಲಿ ವ್ಯಾಪಾರ ನಡೆಸಲು ಅನುಮತಿ ನೀಡಬೇಕು. ಸಿಐಟಿಯು ಮುಖಂಡ ತಿಮ್ಮೇಗೌಡರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿ ವ್ಯಾಪಾರಿಗಳು ಡಿವೈಎಸ್ಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ಡಿವೈಎಸ್ಪಿ ಎಂ.ಜೆ.ಪೃಥ್ವಿ, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ 144 ಸೆಕ್ಷನ್ ಜಾರಿಯಲ್ಲಿದೆ. ಈ ರೀತಿ ಅನುಮತಿ ಮತ್ತು ಅಂತರ ವಿಲ್ಲದೇ ಪ್ರತಿಭಟನೆ ಮಾಡುವಂತಿಲ್ಲ ಎಂದು ಹೇಳಿದರು.

ಆದರೆ, ಇದಕ್ಕೊಪ್ಪದ ಪ್ರತಿಭಟನಕಾರರು ಬಂಧಿತ ಮುಖಂಡರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿದರು.

ಈ ವೇಳೆ ಕಾರ್ಮಿಕ ಮುಖಂಡರಾದ ರಾಮಕೃಷ್ಣ, ಪುಟ್ಟಮಾಧು, ಭರತ್ ರಾಜ್, ಸುಶೀಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.