ADVERTISEMENT

ಮಂಡ್ಯ: ಇನ್‌ಸ್ಪೆಕ್ಟರ್‌ ಇಲ್ಲದಿದ್ದರೂ ಹಣ ವಸೂಲಿ ಮಾಡುತ್ತಿದ್ದ ಜೀಪ್‌ ಚಾಲಕ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 15:57 IST
Last Updated 22 ಸೆಪ್ಟೆಂಬರ್ 2021, 15:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಳವಳ್ಳಿ: ಆರ್‌ಟಿಒ ಇನ್‌ಸ್ಪೆಕ್ಟರ್‌ ಇಲ್ಲದಿದ್ದರೂ ಇನ್‌ಸ್ಪಕ್ಟರ್‌ ಜೀಪ್‌ ಚಾಲಕ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿಕೊಂಡು ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ ವೇಳೆ ಸಾರ್ವಜನಿಕರಿಗೆ ಮಂಗಳವಾರ ಸಿಕ್ಕಿಬಿದ್ದಿದ್ದಾನೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪಟ್ಟಣದ ಹೊರವಲಯದ ಶಾಂತಿ ಶಿಕ್ಷಣ ಸಂಸ್ಥೆಯ ಬಳಿ ಮಂಡ್ಯ ಆರ್‌ಟಿಒ ಜೀಪ್ ಚಾಲಕ ತನ್ನ ಮೇಲಾಧಿಕಾರಿ ಇಲ್ಲದಿದ್ದರೂ ವಾಹನ ತಡೆಯುತ್ತಿದ್ದ. ಸಾರಿಗೆ ಇನ್‌ಸ್ಪಕ್ಟರ್‌ ಅವರಿಗೆ ಹಣ ಕೊಡಬೇಕು ಎಂದು ವಸೂಲಿ ಮಾಡುತ್ತಿದ್ದ. ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನ ಬಳಿ ₹ 6 ಸಾವಿರ ಹಣ ಕೇಳುತ್ತಿದ್ದ ದೃಶ್ಯವನ್ನು ಸಾರ್ವಜನಿಕರು ಸೆರೆಹಿಡಿದಿದ್ದಾರೆ.

ಸಾರ್ವಜನಿಕರು ಚಾಲಕನ ಸುತ್ತುವರಿದು ಪ್ರಶ್ನೆ ಮಾಡಲು ಮುಂದಾಗುತ್ತಿದಂತೆಯೇ ತಬ್ಬಿಬ್ಬಾದ ಚಾಲಕ ‘ನಮ್ಮ ಸಾಹೇಬ್ರು ಕೋರ್ಟ್ ಗೆ ಹೋಗಿದ್ದಾರೆ. ಬರ್ತಾರೆ, ಅದಕ್ಕೆ ನಾವು ಮತ್ತು ನಮ್ಮವರು ತಪಾಸಣೆ ಮಾಡುತ್ತಿದ್ದೇವೆ’ ಎಂದು ಕಾರಣ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಬಗ್ಗೆ ಸ್ಥಳೀಯರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಆ ಚಾಲಕ ಜೀಪ್‌ನೊಂದಿಗೆ ತೆರಳಿದ್ದಾನೆ.

ADVERTISEMENT

ಪ್ರತಿಭಟನೆ: ಘಟನೆಯ ನಂತರ ಸಾರ್ವಜನಿಕರು ಮಂಡ್ಯದ ಆರ್‌ಟಿಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಆರ್‌ಟಿಒ ಕಚೇರಿಯ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹಣ ವಸೂಲಿ ಮಾಡುತ್ತಿದ್ದ ಚಾಲಕ ಹಾಗೂ ಅದಕ್ಕೆ ಕಾರಣನಾದ ಆರ್‌ಟಿಒ ಇನ್‌ಸ್ಪಕ್ಟರ್‌ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಶ್ವತ್ಥ್‌, ಅಭಿ, ಮಹೇಶ್‌, ಸಿದ್ದರಾಜು, ರಾಜು ಹೆಗಡೆ, ಕೃಷ್ಣ, ನಾಗರಾಜು, ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.