ADVERTISEMENT

ಒಂದೇ ದಿನ 96 ಮಂದಿಗೆ ಕೋವಿಡ್‌ ದೃಢ

1343ಕ್ಕೆ ಏರಿಕೆಯಾದ ಒಟ್ಟು ರೋಗಿಗಳ ಸಂಖ್ಯೆ, 469 ಪ್ರಕರಣ ಸಕ್ರಿಯ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 14:56 IST
Last Updated 28 ಜುಲೈ 2020, 14:56 IST

ಮಂಡ್ಯ: ಮಂಗಳವಾರ ಒಂದೇ ದಿನ 96 ಮಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 1343ಕ್ಕೆ ಏರಿಕೆಯಾಗಿದೆ.

ಕಳೆದೊಂದು ತಿಂಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಮಂಡ್ಯ ತಾಲ್ಲೂಕೊಂದರಲ್ಲೇ 30ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ಬಹುತೇಕ ಮಂದಿ ನಗರಕ್ಕೆ ಸೇರಿದ್ದಾರೆ. ನಗರದ ಬಹುತೇಕ ಕಡೆ ಸೋಂಕಿತರ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ನಗರದಲ್ಲಿ ಸೀಲ್‌ಡೌನ್‌ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಾ ಸಾಗುತ್ತಿದೆ.

68,283ನೇ ರೋಗಿಯ ಐವರು ಪ್ರಥಮ ಸಂಪರ್ಕಿತರಲ್ಲಿ ಸೋಂಕು ಪತ್ತೆಯಾಗಿದೆ. 99,293ನೇ ರೋಗಿಯ ನಾಲ್ವರು ಪ್ರಥಮ ಸಂಪರ್ಕಿತರಲ್ಲಿ ಸೋಂಕು ಪತ್ತೆಯಾಗಿದೆ. ಬಹುತೇಕ ಮಂದಿಗೆ ಹೊರರಾಜ್ಯ, ಜಿಲ್ಲೆಯ ಸಂಪರ್ಕ ಇಲ್ಲದಿದ್ದರೂ ರೋಗ ದೃಢಪಟ್ಟಿದೆ. ಸ್ವಯಂಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಳವಾಗಿದ್ದು ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ.

ADVERTISEMENT

ಬೆಂಗಳೂರಿನಿಂದ ಬಂದ ನಾಗಮಂಗಲ ತಾಲ್ಲೂಕಿನ ಜನರಲ್ಲೂ ಹೆಚ್ಚಾಗಿ ಸೋಂಕು ದೃಢವಾಗುತ್ತಿದೆ. ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಯಲ್ಲೂ ಕೋವಿಡ್‌ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಾಸಿಟಿವ್‌ ಬರುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ.

‘ರ‍್ಯಾಪಿಡ್‌ ಆಂಟಿಜೆನ್‌ ಕಿಟ್‌ ಮೂಲಕ ಪರೀಕ್ಷೆ ಮಾಡುತ್ತಿರುವ ಹಿನ್ನೆಲೆಯ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

56 ಮಂದಿ ಬಿಡುಗಡೆ: ಕೋವಿಡ್‌ನಿಂದ ಗುಣಮುಖರಾದ 56 ಮಂದಿಯನ್ನು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮಂಡ್ಯ 23, ಶ್ರೀರಂಗಪಟ್ಟಣ 12, ಮದ್ದೂರು 10, ಮಳವಳ್ಳಿ 4, ಕೆ.ಆರ್‌.ಪೇಟೆ 2, ಪಾಂಡವಪುರ, ನಾಗಮಂಗಲ ತಲಾ 1, ಹಾಸನ 2, ಮೈಸೂರು ಜಿಲ್ಲೆಯ ಒಬ್ಬರನ್ನು ಬಿಡುಗಡೆ ಮಾಡಲಾಯಿತು. ಒಟ್ಟು ಸೋಂಕಿತರಲ್ಲಿ 864 ಮಂದಿ ಗುಣಮುಖರಾಗಿದ್ದು 469 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಷೇಧಿತ ವಲಯ: ಅಂಗಡಿ ವಹಿವಾಟು

ವಿದ್ಯಾನಗರದ ಅನ್ನಪೂರ್ಣೇಶ್ವರಿ ದೇವಾಲಯದ ಬಳಿ ಇರುವ ಪಿಜ್ಜಾ ಹಟ್‌, ದೋಸೆ ಕಾರ್ನರ್‌ ಕುಟುಂಬ ಸದಸ್ಯರಲ್ಲಿ ಕೋವಿಡ್‌ ಪತ್ತೆಯಾಗಿದೆ. ರೋಗ ಪತ್ತೆಯಾಗಿ ಆ ರಸ್ತೆಯನ್ನು ನಿಷೇಧಿತ ವಲಯ ಎಂದು ಘೋಷಣೆ ಮಾಡಿದ್ದರೂ ಪಿಜ್ಜಾ ಹಟ್‌, ದೋಸೆ ಕಾರ್ನರ್‌ ತೆಗೆದು ವ್ಯಾಪಾರ ಮಾಡಲಾಗಿದೆ. ಹೀಗಾಗಿ ಅಲ್ಲಿ ಖರೀದಿ ಮಾಡಿರುವ ಜನರು, ಅಂಗಡಿಗಳ ಅಕ್ಕಪಕ್ಕದ ನಿವಾಸಿಗಳಿಗೂ ಕೋವಿಡ್‌ ಭೀತಿ ಎದುರಾಗಿದೆ. ಮಂಗಳವಾರ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಂಗಡಿಗಳ ಬಾಗಿಲು ಮುಚ್ಚಿಸಿ, 15 ದಿನಗಳವರೆಗೆ ವಹಿವಾಟು ನಡೆಸದಂತೆ ತಾಕೀತು ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.