ADVERTISEMENT

ಕೂಲಿಕಾರರು ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 10:53 IST
Last Updated 23 ನವೆಂಬರ್ 2019, 10:53 IST
ಮಳವಳ್ಳಿ ಪಟ್ಟಣದ ಭಕ್ತಕನಕದಾಸ ಕ್ರೀಡಾಂಗಣದಲ್ಲಿ ನಡೆದ ಕೃಷಿ ಕೂಲಿಕಾರರ 7ನೇ ಮಳವಳ್ಳಿ ತಾಲ್ಲೂಕು ಸಮ್ಮೇಳನದ ಅಂಗವಾಗಿ ಕೂಲಿಕಾರರ ಉತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ನೀರು ತುಂಬಿದ ಬಿಂದಿಗೆ ಹೊತ್ತು ಕ್ರೀಡೆಯಲ್ಲಿ ಭಾಗವಹಿಸಿದರು.
ಮಳವಳ್ಳಿ ಪಟ್ಟಣದ ಭಕ್ತಕನಕದಾಸ ಕ್ರೀಡಾಂಗಣದಲ್ಲಿ ನಡೆದ ಕೃಷಿ ಕೂಲಿಕಾರರ 7ನೇ ಮಳವಳ್ಳಿ ತಾಲ್ಲೂಕು ಸಮ್ಮೇಳನದ ಅಂಗವಾಗಿ ಕೂಲಿಕಾರರ ಉತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ನೀರು ತುಂಬಿದ ಬಿಂದಿಗೆ ಹೊತ್ತು ಕ್ರೀಡೆಯಲ್ಲಿ ಭಾಗವಹಿಸಿದರು.   

ಮಳವಳ್ಳಿ: ಕೃಷಿ ಕೂಲಿಕಾರರು ಓದುವುದನ್ನು ಕಲಿತು ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ತಮ್ಮ ಹಕ್ಕುಗಳನ್ನು ಸುಲಭವಾಗಿ ಪಡೆಯಬಹುದಾಗಿದೆ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್ ನಾಗರಾಜು ತಿಳಿಸಿದರು.

ಪಟ್ಟಣದ ಭಕ್ತಕನಕದಾಸ ಕ್ರೀಡಾಂಗಣದಲ್ಲಿ ಕೃಷಿ ಕೂಲಿಕಾರರ 7ನೇ ತಾಲ್ಲೂಕು ಸಮ್ಮೇಳನದ ಅಂಗವಾಗಿ ಕೂಲಿಕಾರರ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಕೃಷಿಕೂಲಿಕಾರರು ಅಕ್ಷರಗಳನ್ನು ಕಲಿತು ವಿಷಯಗಳನ್ನು ಹೆಚ್ಚಾಗಿ ತಿಳಿದುಕೊಳ್ಳಬೇಕು, ಕೂಲಿಕಾರರ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಉತ್ಸವ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು,ಪ್ರತಿಯೊಂದು ಗ್ರಾಮದಲ್ಲಿಯೂ ಸಾಂಸ್ಕೃತಿಕ ಉತ್ಸವ ನಡೆಯಬೇಕಿದೆ ಎಂದರು.

ಪ್ರತಿದಿನ ಕೂಲಿ ಮಾಡುತ್ತಾ ಸಂಕಷ್ಟದ ಜೀವನ ಸಾಗಿಸುತ್ತಿರುವ ಕೂಲಿಕಾರರಲ್ಲಿಯೂ ಅಪಾರವಾದ ಪ್ರತಿಭೆ ಆಡಗಿದ್ದು, ತಮ್ಮಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಮತ್ತು ಮನರಂಜನೆಯನ್ನು ಪಡೆಯಲು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ 7ನೇ ಸಮ್ಮೇಳನದ ಅಂಗವಾಗಿ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಕೃಷಿಕೂಲಿಕಾರರು ಕೇವಲ ಕೂಲಿ ಮಾಡುವುದಕ್ಕಷ್ಟೇ ಸೀಮಿತಗೊಳ್ಳದೇ ದೇಶದಲ್ಲಿ ನಡೆಯುವ ವಿದ್ಯಾಮಾನಗಳ ಬಗ್ಗೆ ತಿಳಿದುಕೊಳ್ಳಬೇಕು, ಪತ್ರಿಕೆಗಳನ್ನು ಓದುವುದರಿಂದ ಜ್ಞಾನವನ್ನು ಹೆಚ್ಚಿಸಿ ಕೊಳ್ಳುವುದರ ಜೊತೆಗೆ ಅಕ್ಷರಗಳನ್ನು ಕಲಿಯಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಕೃಷಿ ಕೂಲಿಕಾರರ ತಾಲ್ಲೂಕು ಅಧ್ಯಕ್ಷ ಶಿವಮಲ್ಲಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಕೂಲಿಕಾರರು ಕೂಲಿ ಮಾಡುವುದು ಮತ್ತು ಕೂಲಿಗಾಗಿ ಹೋರಾಟ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸದೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಮನರಂಜನೆಯನ್ನು ಪಡೆಯುವ ಉದ್ದೇಶದಿಂದ ಸಾಂಸ್ಕೃತಿಕ ಉತ್ಸವ ನಡೆಸಲಾಗುತ್ತಿದ್ದು, ಪ್ರತಿಯೊಬ್ಬರಿಗೂ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನೀರು ತುಂಬಿದ ಬಿಂದಿಗೆಯನ್ನು ಒತ್ತು ಓಡುವುದು, ಹಗ್ಗ ಜಗ್ಗಾಟ,ಚಮಚದಲ್ಲಿ ನಿಂಬೆಹಣ್ಣು ಇಟ್ಟು ಹಲ್ಲಿನಲ್ಲಿ ಕಚ್ಚಿಕೊಂಡು ಓಡುವುದು, ಹಿಮ್ಮುಖವಾಗಿ ನಡೆಯುವ ಸ್ಪರ್ಧೆ, 100 ಮೀಟರ್ ಓಟಸ್ಪರ್ಧೆ,ಭಾಷಣ, ಸೇರಿದಂತೆ ವಿವಿಧ ಸ್ಪರ್ಧೆಗಳು ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಕೃಷಿಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾದು, ಜಿಲ್ಲಾ ಮುಖಂಡ ಕೃಷ್ಣೇಗೌಡ, ಪುರಸಭೆ ಸದಸ್ಯರಾದ ನಂದಕುಮಾರ್, ನೂರುಲ್ಲಾ, ಕೃಷಿಕೂಲಿಕಾರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್, ಜಿಲ್ಲಾ ಉಪಾಧ್ಯಕ್ಷ ಬಸರಾಜು, ತಾಲ್ಲೂಕು ಉಪಾಧ್ಯಕ್ಷ ಬಸವಣ್ಣ, ದೊಡ್ಡಮರೀಗೌಡ, ಶಿವಣ್ಣ,ಮಹದೇವಮ್ಮ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.